ಬೆಳ್ತಂಗಡಿ: 2016ರ ಜು.22ರಂದು ಚೆನ್ನೈ ತಾಂಬರಂ ವಾಯುನೆಲೆಯಿಂದ ಅಂಡಮಾನ್ ನಿಕೋಬಾರ್ ಪೋರ್ಟ್ಬ್ಲೇರ್ಗೆ ಪ್ರಯಾಣಿಸುತ್ತಿದ್ದ ಎಎನ್-32 ಯುದ್ಧ ವಿಮಾನ ಬಂಗಾಳಕೊಲ್ಲಿ ಸಮುದ್ರದಲ್ಲಿ ಸಂಪರ್ಕ ಕಡಿತಗೊಂಡ ಕರಾಳ ದಿನಕ್ಕೆ ಇಂದಿಗೆ ನಾಲ್ಕು ವರ್ಷ ಸಂದಿದೆ.
ಸೇವೆಯ ನಿಮಿತ್ತ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ ಸೇರಿ 29 ಭಾರತೀಯ ಸೈನಿಕರು ಇಂದಿಗೂ ಕಣ್ಮರೆಯಾಗಿಯೇ ಉಳಿದಿದ್ದಾರೆ. ಏಕನಾಥ ಶೆಟ್ಟಿ ಬರುವಿಕೆಯ ನಿರೀಕ್ಷೆಯಲ್ಲಿರುವ ಕುಟುಂಬ ಸದಸ್ಯರು ಅನಾಥ ಭಾವದಲ್ಲಿ ಮರುಗುತ್ತಿದ್ದಾರೆ.
ವಿಮಾನವೊಂದು ನಾಪತ್ತೆಯಾಗಿ ಕಿಂಚಿತ್ತು ಕುರುಹು ಪತ್ತೆಯಾಗದಿರುವುದು ಭಾರತೀಯ ವಾಯುಪಡೆ ಇತಿಹಾಸದಲ್ಲೇ ಮೊದಲ ಕರಾಳ ನೆನಪಾಗಿದೆ. ಅಂದು ವಿಮಾನ ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಮತ್ತು ಮಿಲಿಟರಿ ತಜ್ಞರು ಸತತ ಮೂರು ತಿಂಗಳು ಎರಡು ಪಿ - 8ಎ ವಿಮಾನ, ಮೂರು ಡೋರ್ನಿಯರ್ ವಿಮಾನ, ಒಂದು ಜಲಾಂತರ್ಗಾಮಿ, ನೌಕಾಸೇನೆಯ 12 ನೌಕೆಗಳ ಮೂಲಕ ಪ್ರಯತ್ನಿಸಿದ್ದವು.
ಗುರುವಾಯನಕೆರೆ ವೀರ ಸೇನಾನಿ ಏಕನಾಥ ಶೆಟ್ಟಿ ಅವರು ಅದೇ ವಿಮಾನದಲ್ಲಿ ತಮ್ಮ ಸೇವಾ ಪಯಣ ಆರಂಭಿಸಿದ್ದರು. ಅಂದು ಬೆಳಗ್ಗೆ 9.12ಕ್ಕೆ ಸಂಪರ್ಕ ಕಡಿತಗೊಂಡು ಮಧ್ಯಾಹ್ನ 1.50ರ ವರೆಗೂ ಸಂಪರ್ಕ ಸಿಗದೇ ಇದ್ದಾಗ ವಾಯುಸೇನೆ ಮಾಹಿತಿ ನೀಡಿತ್ತು. ಅಂದಿನಿಂದ ಇಂದಿನವರೆಗೂ ಏಕನಾಥಶೆಟ್ಟಿ ನೆನಪಿನಲ್ಲೇ ಪತ್ನಿ ಜಯಂತಿ ಶೆಟ್ಟಿ, ಮಗ ಅಕ್ಷಯ್ ಶೆಟ್ಟಿ, ಪುತ್ರಿ ಅಶಿತಾ ಶೆಟ್ಟಿ ಮರುಗುವಂತಾಗಿದೆ.
ಮಗಳು ಅಶಿತಾ ಶೆಟ್ಟಿ ಎಂಎಚ್ಆರ್ಡಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಬೆಂಗಳೂರು ಬಯೋಕಾನ್ ಲಿಮಿಟೆಡ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಗ ಅಡ್ಯಾರು ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದು, ಅವಕಾಶ ಸಿಕ್ಕಲ್ಲಿ ತಂದೆಯಂತೆ ದೇಶ ಸೇವೆಗೆ ಸನ್ನದ್ಧರಾಗಿದ್ದಾರೆ.