ಸುಬ್ರಹ್ಮಣ್ಯ: ಕುಕ್ಕೆ ಕ್ಷೇತ್ರದಲ್ಲಿ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದ ಮಾಸ್ಟರ್ ಪ್ಲಾನ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಯೋಜನೆಗಳ ಬಗ್ಗೆ ಸಭೆಯಲ್ಲಿ ವರದಿ ಸಿದ್ಧಪಡಿಸಿ ಚರ್ಚಿಸಲಾಯಿತು. ಅಭಿವೃದ್ಧಿ ಕೆಲಸಗಳು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಯೋಜನೆಯ ಮೂರನೇ ಹಂತದ ಕಾಮಗಾರಿಯ ಬಗ್ಗೆ ಶ್ರೀ ದೇವಳದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾಸ್ಟರ್ ಪ್ಲಾನ್‌ನ ಮೂರನೇ ಹಂತದ ಕಾಮಗಾರಿಯಲ್ಲಿ ಕುಕ್ಕೆ ದೇವಳದ ರಥಬೀದಿ ಇಕ್ಕೆಲಗಳಲ್ಲಿ ಮೂಲಭೂತ ಅವಶ್ಯಕತೆಗಳಿಗೆ ಅನುಸಾರವಾಗಿ ಸೇವಾ ಕೌಂಟರ್, ವಿಶ್ರಾಂತಿ ಗೃಹಗಳು, ಹಣ್ಣು ಕಾಯಿ ಮತ್ತು ಬೆಳ್ಳಿ ಅಂಗಡಿ, ಮಾಹಿತಿ ಕೇಂದ್ರ, ವಸ್ತು ಸಂಗ್ರಹಾಲಯ, ಭದ್ರತಾ ಕೊಠಡಿಯನ್ನು ಪಾರಂಪರಿಕ ಶೈಲಿಯಲ್ಲಿ ನಿರ್ಮಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಮಾಹಿತಿ ಸಂಗ್ರಹಿಸಲಾಯಿತು ಎಂದು ಅವರು ಹೇಳಿದರು.
ಆಶ್ಲೇಷ ಬಲಿ ಪೂಜಾ ಮಂದಿರವನ್ನು ದೇವಸ್ಥಾನದ ಉತ್ತರ ಭಾಗದಲ್ಲಿ ಮಾಡಲು ಸಲಹೆ ಕೇಳಿ ಬಂತು. ಹೊರ ಗೋಪುರವನ್ನು ವಿಸ್ತರಿಸಿ, ವಾಸ್ತು ಪ್ರಕಾರ ಕಟ್ಟಡ ನಿರ್ಮಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ದೇವಳದ ವಾಯುವ್ಯ ದಿಕ್ಕಿನಲ್ಲಿ ನೂತನ ಸುಸಜ್ಜಿತವಾದ ಸುಮಾರು ಮೂರು ಸಾವಿರ ಜನ ಕುಳಿತು ಭೋಜನ ಸ್ವೀಕರಿಸಲು ಸಾಧ್ಯವಾಗುವಂತಹ ಮೂರು ಅಂತಸ್ತಿನ ದಾಸೋಹ ಭವನ ನಿರ್ಮಾಣವಾಗಲಿದೆ. ಈ ಭವನವನ್ನು ಕರಾವಳಿ ಜಿಲ್ಲೆಯ ಪಾರಂಪರಿಕ ಕಲ್ಪನೆಯ ಶೈಲಿಯಲ್ಲಿ ಕಟ್ಟಡದ ವಿನ್ಯಾಸದಲ್ಲಿ ನಿರ್ಮಾಣವಾಗಲಿದೆ. ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಎಂಬಲ್ಲಿ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಸುಮಾರು ಒಂದು ಸಾವಿರ ಜನ ಕುಳಿತುಕೊಳ್ಳುವ ಸಭಾಭವನ ನಿರ್ಮಾಣ ಹಾಗೂ ಪಾರ್ಕಿಂಗ್, ಶೌಚಾಲಯ, ತುರ್ತು ವೈದ್ಯಕೀಯ ಸೇವೆ, ಇನ್ನಿತರ ವಸತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಕುಮಾರಧಾರ ಸ್ನಾನಘಟ್ಟದಲ್ಲಿ ಭಕ್ತಾಧಿಗಳು ಸುರಕ್ಷಿತವಾಗಿ ತೀರ್ಥಸ್ನಾನ ಕೈಗೊಳ್ಳಲು ವೈಜ್ಞಾನಿಕವಾದ ಸ್ನಾನಘಟ್ಟ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಸುಮಾರು 20 ಕೋಟಿ ವೆಚ್ಚದಲ್ಲಿ ನೂತನವಾಗಿ ಇಡೀ ಕುಕ್ಕೆ ಕ್ಷೇತ್ರಕ್ಕೆ ಮಾತ್ರವೇ ವಿದ್ಯುತ್ ಒದಗಿಸಲು ಸಹಕಾರಿಯಾಗುವ ನೂತನ ಪವರ್ ಸ್ಟೇಷನ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಸಚಿವ ಎಸ್.ಅಂಗಾರ ಅವರ ಜತೆ ತೆರಳಿ ಮಾತನಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸುಬ್ರಹ್ಮಣ್ಯ ವ್ಯಾಪ್ತಿಯ ಐನೆಕಿದು ಎಂಬಲ್ಲಿ ಸುಮಾರು 17 ಎಕರೆ ಜಾಗದಲ್ಲಿ ನೈಸರ್ಗಿಕ ಗೋಶಾಲೆ ದೇವಳದ ವತಿಯಿಂದ ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಯಿತು. ಗೋವುಗಳು ನೈಸರ್ಗಿಕವಾಗಿ ಬದುಕಿ ಬಾಳುವಂತೆ, ಗೋಶಾಲೆಯ ಸುತ್ತ ಆವರಣ ಗೋಡೆ ನಿರ್ಮಿಸಲಾಗುತ್ತದೆ. ಗೋವುಗಳನ್ನು ಸಂರಕ್ಷಿಸಲು ಇಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಜ್ಞಾನಾಸಕ್ತರಿಗೆ ಮಲೆಕುಟೀರಗಳನ್ನು ಮಾಡುವಂತೆಯೂ ಸಲಹೆ ಸಭೆಯಲ್ಲಿ ಕೇಳಿ ಬಂತು. ಇವುಗಳನ್ನು ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಚಿವರು ಮಾಹಿತಿ ನೀಡಿದರು.