ಸುಳ್ಯ (ದಕ್ಷಿಣ ಕನ್ನಡ) : ಮೂರು ದಿನ ಕಳೆದರೂ ತಾಯಿ ಆನೆ ತನ್ನ ಮರಿಯನ್ನು ಹುಡುಕಿಕೊಂಡು ಬಾರದ ಹಿನ್ನೆಲೆಯಲ್ಲಿ ಅಜ್ಜಾವರದಲ್ಲಿದ್ದ ಮೂರು ತಿಂಗಳ ಆನೆ ಮರಿಯನ್ನು ವಿಧಿಯಿಲ್ಲದೇ ಕೊಡಗಿನ ದುಬಾರೆ ಆನೆ ಶಿಬಿರಕ್ಕೆ ಶನಿವಾರ ಪಿಕಪ್ ವಾಹನದಲ್ಲಿ ಸ್ಥಳಾಂತರಿಸಲಾಯಿತು.
ಮೂರು ದಿನಗಳ ಹಿಂದೆ ಸುಳ್ಯದ ಅಜ್ಜಾವರದಲ್ಲಿ ಸನತ್ ರೈ ಎಂಬುವರ ತೋಟದ ಬಳಿಗೆ ಆಹಾರ ಹುಡುಕುತ್ತಾ ಬಂದ ಎರಡು ದೊಡ್ಡ ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಆಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದಿದ್ದವು. ಇದರಲ್ಲಿ ಎರಡು ದೊಡ್ಡ ಕಾಡಾನೆಗಳು ಮತ್ತು ಒಂದು ಮರಿಯಾನೆ ಕೆರೆಯಿಂದ ಹೊರಬರಲು ಅರಣ್ಯ ಇಲಾಖೆ ಸಿಬ್ಬಂದಿ ಅನುಕೂಲ ಮಾಡಿಕೊಟ್ಟಿದ್ದರು. ಆದರೆ, ಸಂಪೂರ್ಣ ಸುಸ್ತಾಗಿದ್ದ ಸುಮಾರು 3 ತಿಂಗಳ ಗಂಡು ಮರಿಯಾನೆ ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಈ ಮರಿಯನ್ನು ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರು ಕೆರೆ ಕೆಳಗಿಳಿದು ಮೇಲಕ್ಕೆ ದೂಡಿ ಹತ್ತಿಸಿದ್ದರು. ನಂತರದಲ್ಲಿ ಆ ಮರಿಯನ್ನು ತಮ್ಮ ತಂಡದೊಂದಿಗೆ ಸೇರಿಸಿಕೊಳ್ಳದೆ ಕಾಡಾನೆಗಳ ತಂಡ ಕೇರಳ ಕಡೆಗೆ ಪ್ರಯಾಣ ಬೆಳೆಸಿತು.
ಇದನ್ನೂ ಓದಿ : ಕಾಡಿಗೆ ಬಿಟ್ಟರೂ ಮರಳಿ ನಾಡಿಗೆ ಬರ್ತಿದೆ ಮರಿಯಾನೆ: ಸುಳ್ಯದಲ್ಲಿ ಅರಣ್ಯ ಇಲಾಖೆಗೆ ಫಜೀತಿ- ವಿಡಿಯೋ
ಬಾಕಿಯಾದ ಈ ಮರಿಯಾನೆಯನ್ನು ಮನುಷ್ಯರು ಮುಟ್ಟಿ ಮೇಲಕ್ಕೆ ಹತ್ತಿಸಿದ್ದರಿಂದ ಉಳಿದ ಕಾಡಾನೆಗಳು ಅದನ್ನು ಸ್ವೀಕರಿಸುತ್ತಿಲ್ಲ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಮಾತನಾಡಿದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರು, "ಪ್ರಸ್ತುತ ಮರಿಯಾನೆಯನ್ನು ದೊಡ್ಡ ಆನೆಗಳ ಹಿಂಡಿಗೆ ಒಂದು ಬಾರಿ ಸೇರಿಸಲಾಗಿತ್ತು. ಒಮ್ಮೆ ನಾವು ಅದನ್ನು ಆನೆ ಹಿಂಡಿನ ಬಳಿಗೆ ಕರೆದೊಯ್ದು ಬಿಟ್ಟು ಬಂದೆವು. ಆದರೆ, ಅದು ಮತ್ತೆ ಮರಳಿ ವಾಪಸ್ ಬರುತ್ತಿದೆ. ಈ ಆನೆ ಮರಿ ತನ್ನ ಗುಂಪಿನೊಂದಿಗೆ ಹೋಗಲು ಮುಂದಾಗುತ್ತಿಲ್ಲ " ಎಂದರು.
ಇದನ್ನೂ ಓದಿ : 'ಹನಿಟ್ರ್ಯಾಪ್' ಮೂಲಕ ತೀರ್ಥಹಳ್ಳಿ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ
"ಈಗಾಗಲೇ ತಜ್ಞ ವೈದ್ಯ ಸುಳ್ಯದ ಡಾ.ನಿತಿನ್ ಪ್ರಭು ಅವರಿಂದ ಸಲಹೆಗಳನ್ನು ಪಡೆದಿದ್ದೇವೆ. ಅವರ ಸಲಹೆಯಂತೆ ಕಾಡಿನ ಅಂಚಿನಲ್ಲಿ ಗುಂಪಿನಿಂದ ಬೇರೆಯಾಗಿ ಇರುವ ಮರಿಯನ್ನು ಗುಂಪಿಗೆ ಸೇರಿಸಲು ಸತತ ಪ್ರಯತ್ನವನ್ನು ನಾವು ಇಲಾಖೆ ವತಿಯಿಂದ ನಡೆಸಿದ್ದೆವು. ಆದರೆ, ಮರಿಯಾನೆ ಯಾವುದೇ ಆಹಾರ ಸೇವಿಸದೇ ಇರುವುದು ನಮಗೂ ದೊಡ್ಡ ಸಮಸ್ಯೆಯಾಗಿತ್ತು. ಪ್ರಸ್ತುತ ತಜ್ಞರ ಸಲಹೆ ಪಡೆದು ಮರಿಯಾನೆಗೆ ಲ್ಯಾಕ್ಟೋಜನ್ ಸೇರಿದಂತೆ ಗ್ಲೂಕೋಸ್‌ಯುತ್ತ ನೀರನ್ನು ನೀಡಲಾಗುತ್ತಿದೆ. ಆನೆ ಮರಿ ಸದ್ಯಕ್ಕೆ ಆರೋಗ್ಯವಾಗಿದೆ. ಮಾತ್ರವಲ್ಲದೆ, ನಮ್ಮ ಸಿಬ್ಬಂದಿ ಮರಿಯಾನೆಗೆ ಕಾವಲಾಗಿ ನಿಂತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಮರಿಯಾನೆಯನ್ನು ತಜ್ಞರ ಸಲಹೆಯಂತೆ ದುಬಾರೆ ಆನೆ ಕ್ಯಾಂಪ್ಗೆ ವರ್ಗಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಫುಟ್ಬಾಲ್, ಕ್ರಿಕೆಟ್, ದೇವರ ಸೇವೆ ಎಲ್ಲದಕ್ಕೂ ಸೈ ಅಂತಾಳೆ ಮಹಾಲಕ್ಷ್ಮಿ: ಪೈಪ್ ಹಿಡಿದು ನಿಂತರೆ ಅರ್ಧ ಗಂಟೆ ಸ್ನಾನ!