ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಳಿಗಾಲದ ಋತುವಿಗೆ 26 ಶೇಕಡಾದಷ್ಟು ವಿಮಾನ ಹಾರಾಟದಲ್ಲಿ ಹೆಚ್ಚಳವಾಗಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಅಕ್ಟೋಬರ್ 29 ರಿಂದ ಚಳಿಗಾಲದ ಋತು ಆರಂಭವಾಗಲಿದೆ. ಅಕ್ಟೋಬರ್ 29 ರಿಂದ ನವೆಂಬರ್ 15 ರ ನಡುವೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ 26ರ ವರೆಗೆ ವಿಮಾನ ಹಾರಾಟ ಹೆಚ್ಚಲಿದೆ. ಈ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಚಳಿಗಾಲದ ವೇಳಾಪಟ್ಟಿಯನ್ನು ಹಂತಹಂತವಾಗಿ ಹೆಚ್ಚಿಸಲಿದೆ. ವಿಮಾನ ನಿಲ್ದಾಣವು ಸದ್ಯ ವಾರಕ್ಕೆ 136 ವಿಮಾನಗಳನ್ನು ನಿರ್ವಹಿಸುತ್ತಿದೆ. ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ವಲಯದಲ್ಲಿ ಇದು ಅಕ್ಟೋಬರ್ 29 ರಂದು 138 ವಿಮಾನಗಳಿಗೆ (1% ಹೆಚ್ಚಳ) ಹೆಚ್ಚಾಗುತ್ತದೆ. ನವೆಂಬರ್ 3 ರಿಂದ 145 (7%) ಕ್ಕೆ ಏರುತ್ತದೆ. ನವೆಂಬರ್ 6 ರಿಂದ 158 ವಿಮಾನಗಳು (16%) ಮತ್ತು ನವೆಂಬರ್ 15 ರಿಂದ 172 ವಿಮಾನಗಳು (25%) ಹೆಚ್ಚಾಗಲಿದೆ.
ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ನವೆಂಬರ್ 6 ರಿಂದ ಬೆಂಗಳೂರಿಗೆ 78 ಆಸನಗಳ ವಿಮಾನವನ್ನು ಬಳಸಿಕೊಂಡು 2 ದೈನಂದಿನ ವಿಮಾನಗಳನ್ನು ಪರಿಚಯಿಸಲಿದೆ. ಇಂಡಿಗೊ ನವೆಂಬರ್ 3 ರಿಂದ ಮುಂಬೈಗೆ 4 ನೇ ದೈನಂದಿನ ವಿಮಾನವನ್ನು ಆರಂಭಿಸಿದ್ದು, ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಅದನ್ನು ಐದು ವಿಮಾನಗಳಿಗೆ ಹೆಚ್ಚಿಸಲಿದೆ. ಬೆಂಗಳೂರು (5 ದೈನಂದಿನ ವಿಮಾನಗಳು), ಹೈದರಾಬಾದ್ (2 ದೈನಂದಿನ ವಿಮಾನಗಳು) ಮತ್ತು ದೆಹಲಿಗೆ (1 ದೈನಂದಿನ ವಿಮಾನ) ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ವಿಮಾನ ಹಾರಾಟದ ವೇಳೆ ಎಂಜಿನ್ ಆಫ್ ಮಾಡುವ ಯತ್ನ, ಬಂಧನ.. ಈತನ ಅಪಾಯಕಾರಿ ವರ್ತನೆಗೆ ಕಾರಣ ಏನು ಗೊತ್ತಾ?
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ 2ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಇಲ್ಲಿ ಪ್ರತಿದಿನ ಸುಮಾರು 36 ವಿಮಾನಗಳ ಸಂಚಾರ ಮಾಡುತ್ತವೆ. ಈ ವಿಮಾನ ನಿಲ್ದಾಣವನ್ನು ಇತ್ತೀಚೆಗಷ್ಟೇ ರನ್ವೇ ನವೀಕರಣ ಕೈಗೊಳ್ಳಲಾಗಿತ್ತು. ನಿಗದಿತ ವಿಮಾನಗಳ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರದಂತೆ ರನ್ ವೇಯನ್ನು ಮರು ನವೀಕರಣ ಮಾಡಲಾಗಿತ್ತು. ಯೋಜನೆಯನ್ನು ಪೂರ್ಣಗೊಳಿಸಲು 75 ದಿನಗಳಲ್ಲಿ 529 ಗಂಟೆಗಳ ಅವಧಿ ತೆಗೆದುಕೊಳ್ಳಲಾಗಿತ್ತು. ಈ ನಡುವೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಮತ್ತು ನಿರ್ವಹಣೆ ಅಕ್ಟೋಬರ್ 31ರಿಂದ ದೇಶದ ಪ್ರತಿಷ್ಠಿತ ಉದ್ದಿಮೆ ಕಂಪನಿ ಅದಾನಿ ಗ್ರೂಪ್ ತೆಕ್ಕೆಗೆ ಸೇರಲಿದೆ. ಇನ್ನು ಮುಂದೆ ಈ ಏರ್ಪೋರ್ಟ್ನ ಆಗುಹೋಗುಗಳು ಅದಾನಿ ಸಮೂಹದಿಂದಲೇ ನಡೆಯಲಿದೆ.
ಕನ್ಸೆಷನ್ ಅಗ್ರಿಮೆಂಟ್ ಪ್ರಕಾರ 6 ವಿಮಾನ ನಿಲ್ದಾಣಗಳ ಆಡಳಿತ ಮತ್ತು ನಿರ್ವಹಣೆ 50 ವರ್ಷದ ಲೀಸ್ಗೆ ಕೊಡಲಾಗಿದೆ. ಅಗ್ರಿಮೆಂಟ್ ಪ್ರಕಾರ 50 ವರ್ಷ ಅಭಿವೃದ್ಧಿ ಮಾಡಲಾಗುತ್ತದೆ. ಈ ಅಗ್ರಿಮೆಂಟ್ ಪ್ರಕಾರ ಎಎಐ ಸಿಬ್ಬಂದಿ ನಮ್ಮ ಜೊತೆಗೆ ಇದ್ದರು. ಅವರನ್ನು ಇದೀಗ ವರ್ಗಾವಣೆ ಮಾಡಲಾಗಿದ್ದು, ಅಕ್ಟೋಬರ್ 30ರ ನಂತರ ಪೂರ್ಣ ಕಾರ್ಯನಿರ್ವಹಣೆ ಅದಾನಿ ಗ್ರೂಪಿಗೆ ಸೇರಲಿದೆ ಎಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದರು.