ಮಂಗಳೂರು: ಸುರತ್ಕಲ್ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯ(ಎನ್‌ಐಟಿಕೆ)ದ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕೇಂದ್ರ ಶಿಕ್ಷಣ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭಾಗಿಯಾಗಿ, 1,787 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಘಟಿಕೋತ್ಸವದಲ್ಲಿ ಪದವಿ ಪಡೆದ 1,787 ವಿದ್ಯಾರ್ಥಿಗಳಲ್ಲಿ 126 ಮಂದಿ ಪಿಹೆಚ್‌ಡಿ, 817 ಮಂದಿ ಪಿ.ಜಿ, 844 ಮಂದಿ ಬಿ.ಟೆಕ್ ವಿದ್ಯಾರ್ಥಿಗಳು ಸೇರಿದ್ದಾರೆ. 249 ಬಿ.ಟೆಕ್ ವಿದ್ಯಾರ್ಥಿಗಳಿಗೆ ತಮ್ಮ ಪದವಿ ಜೊತೆ ಇತರೆ ವಿಭಾಗಗಳಲ್ಲಿ ಮೈನರ್ ಪದವಿ ಪ್ರದಾನ ಮಾಡಲಾಯಿತು. ಇದೇ ಮೊದಲ ಬಾರಿಗೆ ಎನ್‌ಐಟಿಕೆ ಬಿ.ಟೆಕ್(ಆನರ್ಸ್) ಪದವಿಯನ್ನು ನೀಡಲಾಯಿತು. ಅತ್ಯಧಿಕ ಅಂಕ ಗಳಿಸಿದ 9 ಬಿ.ಟೆಕ್ ವಿದ್ಯಾರ್ಥಿಗಳು ಹಾಗೂ 30 ಪಿಜಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಪದವಿ ಪ್ರದಾನ ಬಳಿಕ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸುಸ್ಥಿರ ಇಂಧನ ಅಭಿವೃದ್ಧಿ ಅತ್ಯಗತ್ಯವಿದ್ದು, ಈ ನಿಟ್ಟಿನಲ್ಲಿ ಎನ್‌ಐಟಿಕೆ ತಂತ್ರಜ್ಞಾನ ಮಹತ್ತರ ಪಾತ್ರವಹಿಸಲಿದೆ. ಎನ್‌ಐಟಿಕೆ ಈಗಾಗಲೇ ಆಹಾರ ತ್ಯಾಜ್ಯ ಬಳಸಿ ನೂರು ಕಿಲೋ ಬಯೋಗ್ಯಾಸ್ ಉತ್ಪಾದಿಸುತ್ತಿದೆ. ಇದನ್ನು ಸರ್ವಸಜ್ಜಿತ ಹೈಡ್ರೋಜನ್ ಇಂಧನ ಸ್ಥಾವರವಾಗಿ ಅಭಿವೃದ್ಧಿಯಾಗುವ ವಿಪುಲ ಅವಕಾಶ ಹೊಂದಿದೆ. ಈ ನಿಟ್ಟಿನಲ್ಲಿ ಹೈಡ್ರೋಜನ್ ಶಕ್ತಿ ಭವಿಷ್ಯದ ಇಂಧನ ಮಾರುಕಟ್ಟೆಯಾಗಲಿದೆ ಎಂದರು.
ಎನ್‌ಐಟಿಕೆಯು ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಮುಂಚೂಣಿ ಸಾಧನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ಗಮನಾರ್ಹ ಸಂಶೋಧನೆ ನಡೆಸಬೇಕಾಗಿದೆ. ಹೈಡ್ರೋಜನ್ ಉತ್ಪಾದನೆ ಭವಿಷ್ಯದ 22ನೇ ಶತಮಾನದ ಬೃಹತ್ ಯೋಜನೆಯಾಗಲಿದ್ದು, ಐಟಿ ಕ್ಷೇತ್ರದಲ್ಲಿ ಇದಕ್ಕೆ ಪೂರಕವಾದ ಕ್ರಾಂತಿಕಾರಕ ಬದಲಾವಣೆ ನಡೆಯಬೇಕಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸೋನಾ ಗ್ರೂಪ್ ಆಫ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಯಜ್ಞನಾರಾಯಣ, ಭಾರತೀಯ ವಲಯ ಮೈರೆ ಟೆಕ್ನಿಮಾಂಟ್ ಇಟಲಿ ಇದರ ಉಪಾಧ್ಯಕ್ಷ ಮಿಲಿಂದ್ ವಿ.ಬರಿಡೇ ಅತಿಥಿಯಾಗಿದ್ದರು. ಎನ್‌ಐಟಿಕೆ ನಿರ್ದೇಶಕ ಪ್ರೊ. ಪ್ರಸಾದ್ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಡಾ.ಭರತ್ ಶೆಟ್ಟಿ, ನಿರ್ದೇಶಕರಾದ ಪ್ರೊ.ಎಂ.ಎನ್.ರಾಜೇಂದ್ರ, ಸಿಆರ್‌ಎಫ್ ಅಧ್ಯಕ್ಷ ಪ್ರೊ.ಸತ್ಯನಾರಾಯಣ, ರಿಜಿಸ್ಟ್ರಾರ್ ಪ್ರೊ.ರವೀಂದ್ರನಾಥ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ, ಬದಲಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ: ಶಿಕ್ಷಣ ಸಚಿವ ನಾಗೇಶ್