ಪುತ್ತೂರು: ಕಳೆದೊಂದು ವಾರದಿಂದ ಸತತವಾಗಿ ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇಂದು ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಕಬಕ ಸಮೀಪದ ಮುರದ 26 ವರ್ಷದ ಯುವಕನಲ್ಲಿ ಮತ್ತು ಚಿಕ್ಕಪುತ್ತೂರಿನ 25 ವರ್ಷದ ಯುವಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರಿಬ್ಬರ ಗಂಟಲು ದ್ರವ ಮಾದರಿಯನ್ನು ಜೂ.27 ರಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಿ, ಮಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಇಂದು ಇಬ್ಬರ ಪರೀಕ್ಷಾ ವರದಿ ಪುತ್ತೂರು ವೈದ್ಯರ ಕೈ ಸೇರಿದೆ.
ಮುರದ ಯುವಕ ಮೈಸೂರಿನಲ್ಲಿ ತರಕಾರಿ, ಹಣ್ಣು ಹಂಪಲು ಮಳಿಗೆಯಲ್ಲಿ ಉದ್ಯೋಗಿಯಾಗಿದ್ದು, ಲಾಕ್‌ಡೌನ್ ಸಂದರ್ಭ ಊರಿಗೆ ಆಗಮಿಸಿದ್ದರು. ಅವರಲ್ಲಿ ಕೊರೊನಾ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆ, ಟೆಸ್ಟ್ ಗೆ ಒಳಗಾಗಿದ್ದರು. ಇನ್ನೂ ಗೂಡ್ಸ್ ಲಾರಿ ಚಾಲಕನಾಗಿರುವ ಚಿಕ್ಕ ಪುತ್ತೂರು ನಿವಾಸಿಗೂ ಕೊರೊನಾ ತಗುಲಿರುವುದು ದೃಢ ಪಟ್ಟಿದೆ.
ಇವರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇದೇ ರೀತಿ ಕಳೆದ ಕೆಲ ದಿನಗಳಿಂದ ಪತ್ತೆಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿಯೂ ಸೋಂಕಿನ ಮೂಲ ನಿಗೂಢವಾಗಿದೆ. ಸೋಂಕಿನ ಮೂಲ ಪತ್ತೆಯಾಗದಿರುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಅಷ್ಟೇ ಅಲ್ಲದೆ, ಮಂಗಳೂರಿನ ಕೋವಿಡ್ ಅಸ್ಪತ್ರೆಯಲ್ಲಿ ಬೆಡ್ ನ ಅಭಾವ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ . ತಾಲೂಕಿನಲ್ಲಿ ಕೊರೊನಾ ಸಂಕಷ್ಟ ಪ್ರಾಥಮಿಕ ಹಂತದಲ್ಲಿ ಇರುವಾಗಲೇ ಬೆಡ್ ಗಳ ಕೊರತೆ ಎದುರಾಗಿರುವುದರಿಂದ, ಸೋಂಕು ಮತ್ತಷ್ಟು ಹೆಚ್ಚುವ ವೇಳೆ ಪರಿಸ್ಥಿತಿ ಶೋಚನೀಯ ಹಂತ ತಲುಪಬಹುದೇ ಎಂಬ ಭಯ ಜನರನ್ನು ಕಾಡುತ್ತಿದೆ.