ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಮಳೆ-ಗಾಳಿಯ ಅಬ್ಬರಕ್ಕೆ ಬಂಟ್ವಾಳ ತಾಲೂಕಿನ 14 ಮನೆಗಳಿಗೆ ಹಾನಿಯಾಗಿದೆ.
ತಾಲೂಕಿನ ಬಾಳ್ತಿಲ, ಮೇರಮಜಲು, ಕೆದಿಲ, ದೇವಸ್ಯಪಡೂರು, ಕಾವಳಪಡೂರು, ಕೊಳ್ನಾಡು, ಸಾಲೆತ್ತೂರು, ಕಳ್ಳಿಗೆ, ಬಿ.ಮೂಡ, ಸಜೀಪಮುನ್ನೂರು, ವಿಟ್ಲಪಡ್ನೂರು, ಇಡ್ಕಿದು, ಕರೋಪಾಡಿ ಗ್ರಾಮದ ಒಟ್ಟು 14 ಮನೆಗಳು ಮಳೆ-ಗಾಳಿಯಿಂದಾಗಿ ಹಾನಿಗೊಳಗಾಗಿವೆ. ಈ ಪೈಕಿ 2 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದರೆ, 2 ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದೆ. 9 ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು, 1 ದನದ ಕೊಟ್ಟಿಗೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಇನ್ನು, ಭಾರೀ ಮಳೆಯಿಂದಾಗಿ ನೇತ್ರಾವತಿ ನದಿ 7.3 ಮೀಟರ್ ಎತ್ತರಕ್ಕೆ ಹರಿಯುತ್ತಿದ್ದು, ಅಪಾಯದ ಮಟ್ಟ 8.5 ಮೀಟರ್ ಆಗಿದೆ.