ಚಿತ್ರದುರ್ಗ: ಆಂಧ್ರಪ್ರದೇಶ ಸರ್ಕಾರ ಖಾಸಗಿ ಮದ್ಯದಂಗಡಿಗಳಿಗೆ ನಿಷೇಧ ಹೇರುತ್ತಿದ್ದಂತೆ, ಜಿಲ್ಲೆಯ ಗಡಿ ಭಾಗಕ್ಕೆ ಅಲ್ಲಿನ ಬಾರ್‌ಗಳು ಸ್ಥಳಾಂತರಗೊಂಡಿವೆ. ಇತ್ತ ಆಂಧ್ರ ಮೂಲದ ಮದ್ಯ ವ್ಯಸನಿಗಳು ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನ ಮದ್ಯ ಸೇವನೆಗೆ ಬಂದು ಸಾರ್ವಜನಿಕ ಸ್ಥಳಗಳಲ್ಲಿ ರಂಪಾಟ ನಡೆಸಿ, ಜನರಿಗೆ ತೊಂದರೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಚಳ್ಳಕೆರೆ ತಾಲೂಕಿನ ಸಿದ್ದೇಶ್ವರದುರ್ಗ ಗ್ರಾಮದಲ್ಲಿ ಏಕಾಏಕಿಯಾಗಿ ಬಾರ್ ಆರಂಭಿಸುತ್ತಿದ್ದಂತೆ, ಗ್ರಾಮಕ್ಕೆ ಮದ್ಯದಂಗಡಿ ಬೇಡವೆಂದು ಗ್ರಾಮಸ್ಥರು ಶನಿವಾರದಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆಗಿಳಿದಿದ್ದಾರೆ. ಗ್ರಾಮಸ್ಥರಿಗೆ ಚಳ್ಳಕೆರೆ ಶಾಸಕ ರಘುಮೂರ್ತಿ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಈಗಾಗಲೇ ಗಡಿ ಭಾಗಕ್ಕೆ 10ಕ್ಕೂ ಅಧಿಕ ಬಾರ್‌ಗಳನ್ನು ಸ್ಥಾಳಾಂತರ ಮಾಡಲಾಗಿದೆ. 35 ಬಾರ್‌ಗಳ ಸ್ಥಳಾಂತರ ಅರ್ಜಿಗಳು ಅಬಕಾರಿ ಇಲಾಖೆ ಟೇಬಲ್ ಮೇಲೆ ಇವೆ ಎಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಅಧಿಕಾರಿಗಳ ವಿರುದ್ಧವೇ ಸಿಡಿಮಿಡಿಗೊಂಡಿದ್ದರು. ಇತ್ತ ಸಿದ್ದೇಶ್ವರದುರ್ಗ ಗ್ರಾಮದಲ್ಲಿ ಬಾರ್ ತೆರೆಯಲು ಅನುಮತಿ ನೀಡದಂತೆ ಸ್ವತಃ ಶಾಸಕ ರಘುಮೂರ್ತಿ ಟೊಂಕ ಕಟ್ಟಿ ನಿಂತು ಬಾರ್ ಆರಂಭಿಸದಂತೆ ಒತ್ತಾಯಿಸುತ್ತಿದ್ದಾರೆ. ಗ್ರಾಮಕ್ಕೆ ಬಾರ್ ಬೇಡವೆಂದು ಮಹಿಳೆಯರು, ಯುವಕರು, ರೈತ ಸಂಘಟನೆಗಳು ಸೇರಿದಂತೆ ಹಲವರ ವಿರೋಧಿಸಿದ್ದಾರೆ. ಇವರಿಗೆ ಶಾಸಕ ಟಿ. ರಘುಮೂರ್ತಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಓದಿ : ಕಲ್ಯಾಣ ಕರ್ತೃ.. ಪ್ರೇಮಿಗಳ ಪ್ರೇಮಿ.. 200ಕ್ಕೂ ಹೆಚ್ಚು ಜೋಡಿ ಅಂತರ್ಜಾತಿ ಮದುವೆ ಮಾಡಿಸಿದ 'ಪ್ರೇಮಾ'ತ್ಮ
ಗ್ರಾಮಸ್ಥರು ಮದ್ಯದಂಗಡಿಗಳು ಗಡಿ ಗ್ರಾಮಕ್ಕೆ ಸ್ಥಳಾಂತರವಾದರೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಸಿದರೆ, ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕೂಡ ಜನರ ಹಿತದೃಷ್ಟಿಗೆ ಮಾರಕವಾಗುವ ಬಾರ್‌ಗಳು ಜಿಲ್ಲೆಯ ಗಡಿಭಾಗಕ್ಕೆ ಬರುವುದು ಬೇಡ ಎಂದಿದ್ದಾರೆ. ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.