ಚಿತ್ರದುರ್ಗ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿದ್ದ ಕಾಂಗ್ರೆಸ್ ಹಲವು ಗ್ಯಾರಂಟಿಗಳು ಘೋಷಿಸಿತ್ತು. ಇದರಲ್ಲಿ ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಕೂಡ ಸೇರಿತ್ತು. ಜೂನ್ 1ರಿಂದ ಯಾರೂ ಕರೆಂಟ್ ಬಿಲ್ ಕಟ್ಟಬೇಡಿ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರ ಸಭೆಯಲ್ಲಿ ಹೇಳಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುತದೊಂದಿಗೆ ಅಧಿಕಾರಕ್ಕೆ ಬಂದಿದೆ.
ಇನ್ನು ಸರ್ಕಾರ ರಚನೆಯಾಗಿಲ್ಲ ಅದಕ್ಕೂ ಮೊದಲೇ ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸಿರುವ ಘಟನೆ ಚಿತ್ರದುರ್ಗದ ಜಾಲಿಕಟ್ಟೆಯಲ್ಲಿ ನಡೆದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಮೀಟರ್ ರೀಡರ್ಗೆ ಗ್ರಾಮಸ್ಥರು ಪಟ್ಟು ಹಿಡಿದಿರುವ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರು ಸರ್ಕಾರ ರಚಿಸಿ ಆದೇಶ ಮಾಡಿದಲ್ಲಿ ನಾವು ಬೆಸ್ಕಾಂನಿಂದ ಫ್ರೀಯಾಗಿ ಕರೆಂಟ್ ನೀಡುತ್ತೇವೆ. ನಮಗೆ ಇನ್ನೂ ಆದೇಶ ಬಂದಿಲ್ಲ. ಸರ್ಕಾರದ ಆದೇಶ ಬರುವವರೆಗೂ ಬಿಲ್ ಕಟ್ಟಬೇಕು ಎಂದು ಮೀಟರ್ ರೀಡರ್ ಹೇಳಿದ್ದಾರೆ. ಇದಕ್ಕೆ ಒಪ್ಪದ ಗ್ರಾಮಸ್ಥರು ಕಾಂಗ್ರೆಸ್ ಪಕ್ಷ ಗೆದ್ದಲ್ಲಿ ಕರೆಂಟ್ ಫ್ರೀ ಎಂದು ಹೇಳಿದ್ದಾರೆ. ಹಾಗಾಗಿ ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ. ಈ ಕುರಿತು ನೀವು ಸರ್ಕಾರವನ್ನೇ ಕೇಳಿಕೊಳ್ಳಿ. ನಾವು ಯಾವುದೇ ಕಾರಣಕ್ಕೂ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಪಂಚರತ್ನ ರಥಯಾತ್ರೆ ಯಶಸ್ವಿಯಾದರೂ ಜೆಡಿಎಸ್ ಕುಸಿತಕ್ಕೆ ಕಾರಣಗಳೇನು?