ಚಿತ್ರದುರ್ಗ : ಕಾರು ಹಾಗೂ ಲಾರಿಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, 10ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಜಿಲ್ಲೆಯ ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿ 4ರ ಆಲೂರು ಕ್ರಾಸ್ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಮೃತರನ್ನು ಗದಗ ಜಿಲ್ಲೆಯ ಹುಯಿಲಗೋಳ ಗ್ರಾಮದ ಹನುಮಪ್ಪ ಕಳಕಪ್ಪ ಹುನಗುಂದಿ (30), ಗುರಪ್ಪಾ ಹುಗರ್ (26), ರಮೇಶ್ (28), ಪ್ರಶಾಂತ್ ಹಟ್ಟಿ (36) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿರಿಯೂರು ಸರಣಿ ಅಪಘಾತ : ಈರುಳ್ಳಿ ತುಂಬಿಕೊಂಡು ಚಿತ್ರದುರ್ಗ ಕಡೆಯಿಂದ ಬೆಂಗಳೂರಿನತ್ತ ಹೋಗುತ್ತಿದ್ದ ಲಾರಿ ಟೈರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದಿದೆ. ಪರಿಣಾಮ ಹಿಂದೆ ವೇಗವಾಗಿ ಬರುತ್ತಿದ್ದ ಕಾರು, ಲಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರ ಜೊತೆ ಇನ್ನೂ ಎರಡು ಲಾರಿಗಳು ಪಲ್ಟಿಯಾಗಿವೆ.
ಸ್ಥಳಕ್ಕೆ ಎಸ್ಪಿ ಜಿ ರಾಧಿಕಾ, ಡಿವೈಎಸ್ಪಿ ರೋಷರ್ ಜಮೀರ್, ಸಿಪಿಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.