ಚಿತ್ರದುರ್ಗ: ಕೋಟೆನಾಡಿನಲ್ಲಿ ಬರದಿಂದ ಜನ ಕಂಗ್ಗೆಟ್ಟಿದ್ದು, ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿಲ್ಲದೆ ತೋಟಗಳು ಕೂಡ ಒಣಗುತ್ತಿವೆ. ಜಿಲ್ಲೆಯ ಏಕೈಕ ಜಲಾಶಯದಲ್ಲಿ ನೀರು ಪಾತಾಳ ಕಂಡಿದ್ದು, ಅಧಿಕಾರಿಗಳು ಪರ್ಯಾಯ ಯೋಚನೆ ಮಾಡದೇ, ಡೆಡ್ ಸ್ಟೋರೇಜ್ ನೀರನ್ನು ನಗರ ಪ್ರದೇಶಗಳಿಗೆ ಪಂಪ್ ಮಾಡುತ್ತಿರುವುದರಿಂದ ಜಲಾಶಯಕ್ಕೆ ಕಂಟಕ ತರುತ್ತಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಕೂಗಳತೆಯಲ್ಲಿರುವ ವಾಣಿವಿಲಾಸ ಸಾಗರ ಇದೀಗ ನೀರಿಲ್ಲದೆ ತನ್ನ ಒಡಲು ಬರಿದಾಗಿಸಿಕೊಂಡಿದೆ. ನೀರು ಪಾತಾಳಕ್ಕೆ ತಲುಪಿದ್ದರೂ, ಜಿಲ್ಲಾಡಳಿತ ಮಾತ್ರ ಅಳಿದ ಉಳಿದ ನೀರನ್ನು ಬಿಡದೆ ನಗರ ಪ್ರದೇಶಗಳಿಗೆ ಪಂಪ್ ಮಾಡಿ ಅಣೆಕಟ್ಟಿಗೆ ಕುತ್ತು ತರಲು ಹೊರಟಿದೆ. ಇದೇ ಕಾರಣಕ್ಕೆ ಬೀದಿಗಿಳಿದ ರೈತರು, ಕನ್ನಡಪರ, ದಲಿತಪರ ಸಂಘಟನೆಗಳು. ಬರದ ನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ನೀರಿನ ಮೂಲ ವಾಣಿ ವಿಲಾಸ ಸಾಗರ ಉಳಿಸಿ, ಭದ್ರ ನೀರು ಹರಿಸಿ ಎಂದು ಪಟ್ಟು ಹಿಡಿದು ಹಿರಿಯೂರು ಬಂದ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಮೊದಲ ಬಾರಿಗೆ ವಿವಿ ಸಾಗರ ಜಲಾಶಯ ಬರಿದಾಗಿದ್ದು, ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದರೂ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಳ್ಳದೇ ಇಡಿ ಡ್ಯಾಂ ಬರಿದು ಮಾಡುತ್ತಿದೆ. ಇದರಿಂದ ಆತಂಕಗೊಂಡ ರೈತರು ವಿವಿ ಸಾಗರದಿಂದ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹಾಗೂ ಡಿಆರ್ಡಿಓ ಗೆ ಸರಬರಾಜು ಮಾಡುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅಣೆಕಟ್ಟಿಗೆ ಅಪಾಯವಾಗುತ್ತೆ ಎಂದು ಆಗ್ರಹಿಸಿದರು.
ಇನ್ನು ಭದ್ರಾ ಮೇಲ್ದಂಡೆ ಯೋನೆಯಿಂದ ಮುಂದಿನ 15 ದಿನಗಳಲ್ಲಿ ನೀರು ಹರಿಸಬೇಕು. ಜತೆಗೆ ತಕ್ಷಣ ಜಲಾಶಯದಿಂದ ನೀರು ಪಂಪ್ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಡ್ಯಾಂ ಬಳಿ ಪ್ರತಿಭಟನೆ ನಡೆಸುತ್ತವೆ ಎಂದು ಎಚ್ಚರಿಸಿದರು. ನಾಳೆ ಕೂಡ ಈ ಹೋರಾಟ ಮುಂದುವರೆಯಲಿದ್ದು, ವಿವಿಸಾಗರ ಡ್ಯಾಂ ಮುಂದೆ ಪ್ರತಿಭಟನೆಗೆ ಕೂರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.