ಚಿತ್ರದುರ್ಗ: ರೈತರಿಗೆ ಗ್ರೀನ್ ಪಾಸ್ ನೀಡಲಾಗುತ್ತಿದ್ದು, ನಕಲಿ ಪಾಸ್ ಕಂಡುಬಂದಲ್ಲಿ ಕೂಡಲೇ ಬಂಧಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಖಡಕ್ ಎಚ್ಚರಿಕೆ ನೀಡಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ನಕಲಿ ಪಾಸ್ ಬಗ್ಗೆ ದೂರು ಕೇಳಿ ಬಂದಲ್ಲಿ ಪೊಲೀಸರು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು. ಮದ್ಯದ ಅಂಗಡಿ ತೆರೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಣ್ಣೆ ಅಂಗಡಿ ತೆರೆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ, ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೂ ಓಪನ್ ಮಾಡುವ ತೀರ್ಮಾನವಿಲ್ಲ ಎಂದು ಸ್ಪಷ್ಟಪಡಿಸಿದರು.
ಹೂವು, ತರಕಾರಿ ಬೆಳೆಗಾರರ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ನೀಡಲು ಸಿಎಂ ಭರವಸೆ ನೀಡಿದ್ದಾರೆ. ಬೇರೆ ಜಿಲ್ಲೆ, ರಾಜ್ಯಕ್ಕೆ ತರಕಾರಿ, ಹಣ್ಣು ಸಾಗಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೊರ ರಾಜ್ಯಕ್ಕೆ ಹಣ್ಣು, ತರಕಾರಿ ಸರಬರಾಜು ಮಾಡುವ ಲಾರಿ ಪರೀಕ್ಷಿಸುವಂತಿಲ್ಲ ಎಂದರು.
ಸಾಮೂಹಿಕ ನಮಾಜ್ ಮಾಡುವುದರ ಬಗ್ಗೆ ಮಾತನಾಡಿದ ಅವರು, ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡುವಂತಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದ್ದು, ರಂಜಾನ್ ವೇಳೆ ಮನೆಯಲ್ಲಿಯೇ ನಮಾಜ್ ಮಾಡಲು ಸೂಚಿಸಿದೆ. ತಬ್ಲಿಘಿಗೆ ಹೋಗಿ ಬಂದವರು ಕಡ್ಡಾಯವಾಗಿ ಚಿಕಿತ್ಸೆಗೆ ಒಳಪಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.