ಚಿತ್ರದುರ್ಗ: ಎಲ್ಲರ ತಲೆ ಬಿಸಿ ಮಾಡಿದ ಕಿಲ್ಲರ್ ಕೊರೊನಾ ಜಿಲ್ಲೆಯಲ್ಲಿ ಸ್ವಲ್ಪ ಕರುಣೆ ತೋರಿದೆ ಎಂದು ಅನ್ನಿಸುತ್ತಿದೆ. ಅಷ್ಟು-ಇಷ್ಟು ಜನರ ಬಲಿ ತೆಗೆದುಕೊಂಡ ಕೊರೊನಾ, ಜಿಲ್ಲೆಯಲ್ಲಿನ ಗರ್ಭಿಣಿಯರಿಗೆ ಹಾಗೂ ಬಾಣಂತಿಯರು ಸೇರಿದಂತೆ ನವಜಾತ ಶಿಶುಗಳ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ ಅನ್ನೋದು ಇದೀಗ ಆಶ್ಚರ್ಯದ ಜೊತೆಗೆ ನೆಮ್ಮದಿಯನ್ನು ನೀಡಿದೆ. ಇದಕ್ಕೆ ಕಾರಣವೂ ಇದೆ. ಜಿಲ್ಲೆಯದಲ್ಲಿ ಗರ್ಭಿಣಿ ಹಾಗೂ ನವಜಾತ ಶಿಶುಗಳಿಗೆ ಸೋಂಕು ಹಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿದ್ದೆ ಇದಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ. ನವಜಾತ ಶಿಶುಗಳ ಆರೈಕೆಯಲ್ಲಿ ಹೆಚ್ಚು ಹೆಚ್ಚು ಮುತುವರ್ಜಿ ವಹಿಸಿದ್ದರಿಂದ ಈವರೆಗೆ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದಿರುವುದು ಆಶ್ಚರ್ಯವಲ್ಲದೇ ಮತ್ತೇನು?
ಈ ವರೆಗಿನ ಅಂಕಿ-ಸಂಖ್ಯೆ ನೋಡಿದರೆ ಕೋಟೆನಾಡು ಚಿತ್ರದುರ್ಗದಲ್ಲಿ ಮೂರು ಸಾವಿರ ದಾಟಿದೆ. ವೈದ್ಯರು ಹೇಳಿದಂತೆ ಈ ವೈರಸ್ ವೃದ್ಧರು ಹಾಗೂ ಮಕ್ಕಳಲ್ಲಿ ಕಾಣಿಸುವುದು ಹೆಚ್ಚು. ಹಲವಡೆ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ನವಜಾತ ಶಿಶುಗಳಿಗೂ ವಕ್ಕರಿಸಿದೆ - (ವಕ್ಕರಿಸುತ್ತಿದೆ).
ಅದರೆ, ಚಿತ್ರದುರ್ಗದ ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ ಗರ್ಭಿಣಿಯರು, ಬಾಣಂತಿಯರಿಗೆ ಹಾಗೂ ನವಜಾತ ಶಿಶುಗಳಿಗೆ ಕೊರೊನಾ ಹಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಇದೀಗ ಗಮನ ಸೆಳೆದಿದ್ದಾರೆ. ವಿಶೇಷ ಆರೈಕೆಯಿಂದ ಈವರೆಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಐದರಿಂದ ಏಳು ಮಹಿಳೆಯರಿಗೆ ಮುಂಜಾಗ್ರತಾ ಕ್ರಮ ವಹಿಸಿ ಹೆರಿಗೆ ಮಾಡಿಸಲಾಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಇಲ್ಲಿನ ಆರೋಗ್ಯ ಇಲಾಖೆಯ ಮುತುವರ್ಜಿಯಿಂದಲೇ ಗರ್ಭಿಣಿ, ಬಾಣಂತಿಯರು ಸೇರಿದಂತೆ ಮಕ್ಕಳಲ್ಲಿ ಸೋಂಕು ಸುಳಿದಿಲ್ಲ ಅನ್ನೋದು ಗಮನಾರ್ಹದ ಸಂಗತಿ.
ಇನ್ನು ಆಗತಾನೆ ಜನಿಸಿದ ಮಕ್ಕಳಿಗೆ ಕೊರೊನಾ ಸೋಂಕಿತೆ ತಾಯಿ ಹಾಲು ಉಣಿಸುವ ತಪ್ಪು ಕಲ್ಪನೆಗಳನ್ನು ದೂರ ಮಾಡಿರುವ ವೈದ್ಯ ಸಿಬ್ಬಂದಿ ಹಾಲು ಉಣಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ಜಿಲ್ಲಾ ಆರೋಗ್ಯಧಿಕಾರಿ ಡಾ ಪಾಲಾಕ್ಷಪ್ಪ.
ಹೆರಿಗೆ ಮಾಡಿಸಿದ ತಕ್ಷಣ ಆರೋಗ್ಯವಂತ ತಾಯಿ ಹಾಗೂ ಮಗುವನ್ನು ಮುಂಜಾಗ್ರತಾ ಕ್ರಮವಾಗಿ ಮನೆಗೆ ಕಳುಹಿಸುತ್ತಾರೆ. ಕೆಲ ನವಜಾತ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಆರೈಕೆ ಮಾಡಲಾಗುತ್ತಿದೆ. ಈವರೆಗೆ ಇಲ್ಲಿ ಯಾವುದೇ ಕೊರೊನಾ ಲಕ್ಷಣಗಳಿರುವ ತಾಯಿ ಹಾಗೂ ನವಜಾತ ಶಿಶುಗಳು ಪತ್ತೆಯಾಗಿಲ್ಲ. ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳ ಬಗ್ಗೆ ಇಲ್ಲಿನ ಕಾಳಜಿ ನೋಡಿದರೆ ಖುಷಿ ಆಗುತ್ತದೆ ಎನ್ನುತ್ತಾರೆ ಸ್ಥಳೀಯ ಕಾಂತಪ್ಪ. ಒಟ್ಟಿನಲ್ಲಿ ಎಲ್ಲರ ತಲೆ ಬಿಸಿ ಮಾಡಿದ ಕಿಲ್ಲರ್ ಕೊರೊನಾ ಜಿಲ್ಲೆಯಲ್ಲಿ ಸ್ವಲ್ಪ ಕರುಣೆ ತೋರಿದೆ ಎನ್ನಲಾಗುತ್ತಿದೆ.