ಚಿತ್ರದುರ್ಗ: ಪೋಷಕಾಂಶಯುಕ್ತ ಆಹಾರ ಸೇವನೆಯ ಮೂಲಕ ಪ್ರತಿಯೊಬ್ಬರು ಉತ್ತಮ ಆರೋಗ್ಯ ಪಡೆಯಬೇಕು ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪೋಷಣ್ ರಥ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೋಷಣ್ ಅಭಿಯಾನ ವಿಶೇಷ ಕಾರ್ಯಕ್ರಮವಾಗಿದ್ದು, ಜಿಲ್ಲೆಯ ಜನರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ. ಹಾಗಾಗಿ ಈ ಅಭಿಯಾನದ ಬಗ್ಗೆ ತಂದೆ, ತಾಯಿಗಳು ಮತ್ತು ಸರ್ಕಾರ ಹೆಚ್ಚಿನ ಗಮನಹರಿಸಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಠಿಕ ಆಹಾರವನ್ನು ಸೇವಿಸಲು ಪ್ರೋತ್ಸಾಹ ನೀಡುವುದರ ಜೊತೆಗೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಆಫ್ರಿಕನ್ ಸೇರಿದಂತೆ ಅನೇಕ ದೇಶಗಳಲ್ಲಿ ಮಕ್ಕಳು ತಿಂಗಳು ಗಟ್ಟಲೇ ಆಹಾರ ಸಿಗದೆ ನರಳಿ ಸತ್ತು ಹೋಗಿರುವುದನ್ನು ನೋಡಿದ್ದೇವೆ. ಬಹಳಷ್ಟು ಮಕ್ಕಳು ಅಪೌಷ್ಠಿಕತೆಯಿಂದ ರೋಗಗಳಿಗೆ ತುತ್ತಾಗಿರುವುದನ್ನು ಕಂಡಿದ್ದೇವೆ. ಈ ನಿಟ್ಟಿನಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.