ಚಿತ್ರದುರ್ಗ: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಈಗಾಗಲೇ ಕಾಂಗ್ರೆಸ್ ಸಮರ ಸಾರಿದ್ದು, ಪ್ರತಿಭಟನೆ ಧರಣಿ ನಡೆಸುತ್ತಿದ್ದೇವೆ. ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಬಂಡತನ ಪ್ರದರ್ಶಿಸುತ್ತಿದೆ. ಈ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಈಗಾಗಲೇ ಕಾಂಗ್ರೆಸ್ ಸಮರ ಸಾರಿದ್ದು, ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಕಟೀಲ್ ಮ್ಯಾಜಿಕ್ ಚೇರ್ ಮಾತಿಗೆ ಡಿಕೆಶಿ ತಿರುಗೇಟು..
ಕಾಂಗ್ರೆಸ್ನಲ್ಲಿ ಮ್ಯಾಜಿಕ್ ಚೇರ್ ಆಟ ನಡೆಯುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, ಕಾಂಗ್ರೆಸ್ನಲ್ಲಿ ಮ್ಯಾಜಿಕ್ ಚೇರ್ ಆಟ ನಡೆಯುತ್ತಿದೆಯೋ, ಬೇರೆ ಯಾವುದೋ? ಅದು ಇರಲಿ, ಬಿಜೆಪಿಯಲ್ಲಿ ನಡೆಯುತ್ತಿದೆಯಲ್ಲ ಅದು ಯಾವ ಚೇರ್ ಆಟ? ಎಂದು ಪ್ರಶ್ನಿಸಿದರು.
ಕಟೀಲ್ ನೇರ ಡಿಬೇಟ್ಗೆ ಬರಲಿ..
ಮಾಜಿ ಸಿಎಂ ಸಿದ್ದರಾಮಯ್ಯ ಮೋಸಗಾರ ಎಂಬ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ, ಮಾತು ತಪ್ಪಿಲ್ಲ. ಬಸವ ಜಯಂತಿ ದಿನ ಪ್ರಮಾಣವಚನ ಸ್ವೀಕರಿಸಿ ವಿಧಾನಸೌಧ ಪ್ರವೇಶಿಸುವಾಗ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪೈಕಿ ಶೇ.99ರಷ್ಟು ಕೆಲಸ ಮಾಡಿದ್ದಾರೆ. ನಳಿನ್ಕುಮಾರ್ ಬೇಕಿದ್ದರೆ ಈ ಬಗ್ಗೆ ನೇರ ಚರ್ಚೆಗೆ ಬರಲಿ, ನಾವು ರೆಡಿ ಎಂದು ಸವಾಲು ಹಾಕಿದ್ರು.