ಚಿತ್ರದುರ್ಗ: ಮಂಡ್ಯ ಹಾಗೂ ಚಿತ್ರದುರ್ಗ ಜಿಲ್ಲಾಡಳಿತಗಳ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ಕೊರೊನಾ ವೇಳೆಯೂ ಎರಡು ಜಿಲ್ಲಾಡಳಿತಗಳ ಕ್ವಾರಂಟೈನ್ ಹೆಸರಿನ ಯಡವಟ್ಟಿನಿಂದ ಶಿವಮೂರ್ತಿ ಎಂಬ ವೃದ್ಧ ಬೀದಿಗೆ ಬಿದ್ದಿದ್ದಾರೆ.
ಮಂಡ್ಯ ಜಿಲ್ಲಾಡಳಿತವು ಶಿವಮೂರ್ತಿಯವರನ್ನು 30 ದಿನಗಳ ಕಾಲ ಕ್ವಾರಂಟೈನ್ ಮಾಡಿತ್ತು. ನೆಗೆಟಿವ್ ವರದಿ ಬಂದ ಬಳಿಕ ಬಿಡುಗಡೆ ವೇಳೆ ಮಂಡ್ಯದ ಅಧಿಕಾರಿಗಳು ವೃದ್ಧನನ್ನು ಮದ್ದೂರಿಗೆ ಕಳುಹಿಸುವ ಬದಲಾಗಿ ಚಿತ್ರದುರ್ಗಕ್ಕೆ ಕಳಿಸಿ ಯಡವಟ್ಟು ಮಾಡಿದ್ದಾರೆ ಎನ್ನಲಾಗ್ತಿದೆ.
ಮಂಡ್ಯ ಜಿಲ್ಲೆಯ ಅಧಿಕಾರಿಗಳ ಯಡವಟ್ಟಿನಿಂದ ಚಿತ್ರದುರ್ಗಕ್ಕೆ ಆಗಮಿಸಿದ ವೃದ್ಧನಿಗೆ, ಚಿತ್ರದುರ್ಗ ಜಿಲ್ಲಾಡಳಿತ ಮತ್ತೆ ಕ್ವಾರಂಟೈನ್ ಮಾಡಿದೆ. ಕ್ವಾರಂಟೈನ್ ಮುಗಿದ ಬಳಿಕ ಸ್ವಗ್ರಾಮಕ್ಕೆ ತಲುಪಿಸದೇ ಚಿತ್ರದುರ್ಗ ಜಿಲ್ಲಾಡಳಿತವೂ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ, ಖಾಲಿ ಕೈಯಲ್ಲಿ ಊರಿಗೆ ತೆರಳುವಂತೆ ಬೀದಿಗೆ ಬಿಟ್ಟಿದೆ. ಊರಿಗೆ ತೆರಳಲು ವೃದ್ಧ ಪರದಾಟ ನಡೆಸಿದ್ದು, ಲಾಕ್ಡೌನ್ ಹಿನ್ನೆಲೆ ಹಿರಿಯೂರು ತನಕ ಕಾಲ್ನಡಿಗೆಯಲ್ಲೇ ಬಂದಿದ್ದಾರೆ. ಹಿರಿಯೂರು ಸೇರಿದ ವೃದ್ಧ ಶಿವಮೂರ್ತಿಯವರು ಅಸ್ವಸ್ಥನಾಗಿ ನರಳುತ್ತಿರುವುದ ಕಂಡ ರಮೇಶ್ ಎಂಬುವರು ಅವರಿಗೆ ಆಸರೆಯಾಗಿದ್ದು, ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.