ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಫೆ. 29ರಂದು ಜರುಗಲಿದ್ದು, ಭಕ್ತರಲ್ಲಿ ಸಂತಸ ಮನೆಮಾಡಿದೆ.
ಕೊರೊನಾ ಭೀತಿಯಿಂದ ಜಾತ್ರೆಗಳು ನಡೆದಿರದ ಕಾರಣ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ನಡೆಯುತ್ತದೆಯೇ, ಇಲ್ಲವೇ ಎಂಬ ಭಕ್ತರ ಕುತೂಹಲಕ್ಕೆ ತೆರೆಬಿದ್ದಿದೆ. ಇದೇ ತಿಂಗಳ 29ರಂದು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಜರುಗಲಿದೆ.
ತಿಪ್ಪೇರುದ್ರಸ್ವಾಮಿಗೆ ಸ್ಥಳೀಯ ಭಕ್ತರು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಚಿತ್ರದುರ್ಗದ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ ದರ್ಶನ ಪಡೆಯಲು ಹಲವು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿ ದೇಶದ ವಿವಿಧ ಭಾಗದ ಭಕ್ತ ಸಮೂಹ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಾರೆ.
ಇಷ್ಟಾರ್ಥ ಸಿದ್ಧಿಗಾಗಿ ಕ್ವಿಂಟಲ್‍ಗಟ್ಟಲೆ ಒಣ ಕೊಬ್ಬರಿಯನ್ನ ಬೆಂಕಿಯಲ್ಲಿ ಸುಟ್ಟು ಹರಕೆ ತೀರಿಸುವುದು ಇಲ್ಲಿನ ವಾಡಿಕೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಕಳೆದ ವರ್ಷ ಕೊರೊನಾ ಭೀತಿಯ ನಡುವೆಯೂ ಮೂರು ಲಕ್ಷ ಜನ ಜಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಬಾರಿಯೂ ರಥೋತ್ಸವದಲ್ಲಿ ಭಾಗಿಯಾಗಲು ಭಕ್ತರು ಕಾತುರರಾಗಿದ್ದಾರೆ.