ಚಿತ್ರದುರ್ಗ: ಮೀಸಲಾತಿಯಲ್ಲಿ ಒಳಮೀಸಲಾತಿ ಇರುವುದು ಅತ್ಯವಶ್ಯಕವಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಡುವ ಮೂಲಕ 7 ನ್ಯಾಯಧೀಶರ ಪೀಠ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿರುವುದನ್ನು ಸಂಸದ ಎ. ನಾರಾಯಣಸ್ವಾಮಿ ಸ್ವಾಗತಿಸಿದ್ದಾರೆ.
ಚಿತ್ರದುರ್ಗದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ಮೀಸಲಾತಿಗಾಗಿ 26 ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಹೋರಾಟಕ್ಕೆ ಸ್ವಲ್ಪ ಮಟ್ಟಿಗೆ ಜಯ ದೊರಕಿದೆ ಎಂದರು.
ಕರ್ನಾಟಕದಲ್ಲಿ ಸದಾಶಿವ ಆಯೋಗದ ವರದಿ ಬಂದಿದ್ದರಿಂದ ಇಲ್ಲಿ ಕೆಲ ಸಮುದಾಯದವರನ್ನು ಹೊರಗಿಡುತ್ತಾರೆ ಎಂದು ಹಬ್ಬಿಸಲಾಗಿತ್ತು. ಸದಾಶಿವ ಆಯೋಗದ ವರದಿಯಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದ ನನ್ನನ್ನು ಕೂಡ ಅಂದು ಟಾರ್ಗೆಟ್ ಮಾಡಿದ್ದರು ಎಂದರು.
ಈ ಹಿಂದೆ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವುದು ಅಸಾಧ್ಯ ಎಂದು ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಕೂಡ ಖಡಾಖಂಡಿತವಾಗಿ ಹೇಳಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ನ 7 ಸದಸ್ಯರ ಪೀಠ ಮೀಸಲಾತಿಯಲ್ಲಿ ಒಳಮೀಸಲಾತಿ ಇರುವುದು ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಡುವ ಮೂಲಕ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿರುವುದು ಸ್ವಾಗತಾರ್ಹ ಎಂದರು.