ಚಿತ್ರದುರ್ಗ: ಈ ಬಾರಿ ಸಚಿವ ಸಂಪುಟದಲ್ಲಿ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಒಂದಿಬ್ಬರಿಗೆ ಸಿಕ್ಕಿದೆ, ಆದರೆ ಚಿತ್ರದುರ್ಗ ಜಿಲ್ಲೆಗೆ ಪ್ರಾತಿನಿಧ್ಯ ನೀಡಿಲ್ಲ ಎಂಬುದಕ್ಕೆ ಬೇಸರವಿದೆ ಎಂದು ಶಾಸಕ ತಿಪ್ಪಾರೆಡ್ಡಿ ನಿರಾಸೆ ವ್ಯಕ್ತಪಡಿಸಿದರು.
ನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋತ ಯೋಗೇಶ್ವರ್ ಮಂತ್ರಿ ಸ್ಥಾನ ಯಾಕೆ ಕೊಡುತ್ತಾರೆ ಎಂಬುದು ನನಗೆ ಆಶ್ಚರ್ಯವಿದೆ. ಸರ್ಕಾರ ರಚನೆಗೆ ಸಹಕರಿಸಿದ್ದಕ್ಕೆ ಯೋಗೇಶ್ವರ್ಗೆ ಮಂತ್ರಿ ಎಂದು ಹೇಳುತ್ತಾರೆ. ಅದೇನ್ ಸಹಾಯ ಮಾಡಿದ ಅಂತಾ ಇದುವರೆಗೂ ಗೊತ್ತಿಲ್ಲ. ಸೋತವರಿಗೆ ವಿಧಾನ ಪರಿಷತ್ ಸ್ಥಾನ ಕೊಟ್ಟಿದ್ದು ಸಂತೋಷವಿದೆ. ಬಿಜೆಪಿ ಸರ್ಕಾರ ರಚನೆ ವೇಳೆ ಯೋಗೇಶ್ವರ್ ನನಗೂ ಕರೆ ಮಾಡಿದ್ದರು. ಯಾವ ಕಾರಣಕ್ಕೆ ಕರೆ ಮಾಡಿದ್ದರು ಗೊತ್ತಿಲ್ಲ. ಈ ಬಾರಿ ಸಚಿವ ಸಂಪುಟದಲ್ಲಿ ಬೆಳಗಾವಿ, ಬೆಂಗಳೂರಿನವರೇ ಅರ್ಧಕ್ಕಿಂತ ಹೆಚ್ಚಿದ್ದಾರೆ. ಆದರೆ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಬಹುದಿತ್ತು ಎಂದರು. ಇನ್ನು ಮೂರು ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಆದರೆ, ಚಿತ್ರದುರ್ಗ ಜಿಲ್ಲೆಗೆ ಒಂದು ಬಾರಿ ಸ್ಥಾನ ದೊರೆತ್ತಿಲ್ಲ ಎಂದು ನಿರಾಸೆ ವ್ಯಕ್ತಪಡಿಸಿದರು.
ಓದಿ : ಶಾಸಕ ಅಂಗಾರಗೆ ಒಲಿದ ಮಂತ್ರಿ ಭಾಗ್ಯ?
ಇನ್ನು ನೂರು ವರ್ಷ ಬದುಕುತ್ತೇನೆ ಎಂದರೆ ಆಸೆ ಇರಿಸಿಕೊಳ್ಳಬಹುದಿತ್ತು. ಒಂದು ಜನರೇಷನ್ ಸುಮ್ನೆ ವೇಸ್ಟ್ ಎಂದು ಸಚಿವ ಸ್ಥಾನ ನೀಡದಿರುವುದಕ್ಕೆ ತಿಪ್ಪಾರೆಡ್ಡಿ ನಿರಾಸೆ ವ್ಯಕ್ತಪಡಿಸಿದರು. ಒಂದಿಬ್ಬರು ಪಕ್ಷ ವಿರೋಧಿ ಕೆಲಸ ಮಾಡಿದವರಿಗೆ ಮಂತ್ರಿಗಿರಿ ನೀಡಲಾಗುತ್ತಿದೆ, ಈ ಸಲ ಸಚಿವ ಸಂಪುಟದಲ್ಲಿ ಸಮಾನತೆ ಕಾಣುತ್ತಿಲ್ಲ. ಈ ಜನುಮದಲ್ಲಿ 51 ವರ್ಷ ರಾಜಕೀಯ ಕಳೆದಿದ್ದೇನೆ, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಜನ ಸೇವೆಗೆ ಅವಕಾಶ ಸಿಗದಿರುವುದು ನಿರಾಸೆ ಉಂಟು ಮಾಡಿದೆ ಎಂದು ಶಾಸಕ ತಿಪ್ಪಾರೆಡ್ಡಿ ಸಚಿವ ಸ್ಥಾನ ಪಟ್ಟಿಯಲ್ಲಿ ಇಲ್ಲ ಎಂಬುದನ್ನು ಪರೋಕ್ಷವಾಗಿ ಮಾಧ್ಯಮಗಳಿಗೆ ತಿಳಿಸಿದರು.