ಚಿತ್ರದುರ್ಗ: ಸಚಿವ ಸ್ಥಾನಕ್ಕಾಗಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಬಿಜೆಪಿಗೆ ಠಕ್ಕರ್ ಕೊಡಲು ಸ್ವಾಭಿಮಾನದ ಅಸ್ತ್ರ ಬಳಸಿದ್ದಾರೆ. ಹೊಸದುರ್ಗದ ಬನಶಂಕರಿ ಭವನದಲ್ಲಿ ಪ್ರತ್ಯೇಕ ಸಭೆ ನಡೆಸಿ, ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ತಾಲೂಕು ಅಧ್ಯಕ್ಷ ನೇಮಕ ವಿಚಾರದಲ್ಲಿ ನನ್ನನ್ನು ಕಡೆಗಣಿಸಲಾಗಿದ್ದು, ಒಂದು ಇಬ್ಬರು ಸೇರಿ ಮನಸೋ ಇಚ್ಛೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಗೂಳಿಹಟ್ಟಿ ಪಕ್ಷ ಬಿಟ್ಟು ಹೋಗ್ತಾರೆ ಎಂದು ಪಕ್ಷದ ನಾಯಕರಿಗೆ ಚಾಡಿ ಹೇಳ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನನ್ನು ಕಡೆಗಣಿಸುವ ಮೂಲಕ ತುರ್ತಾಗಿ, ಹೊಸದುರ್ಗದ ಶಾಸಕರಾಗಲು ಕೆಲವರಿಂದ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಅವಧಿ ಮುಗಿಯೋವರೆಗೂ ಬಿಜೆಪಿ ಬಿಟ್ಟು ನಾನೆಲ್ಲೂ ಹೋಗಲ್ಲ. ಆದರೆ, ಮೂರು ವರ್ಷದ ಬಳಿಕ ಅಗತ್ಯ ಬಿದ್ದರೆ, ಮತ್ತೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಶಾಸಕರಾಗುವ ಆಸೆ ಇರುವವರು ನನ್ನೆದುರು ಬಂದು ಬಿಜೆಪಿಯಿಂದ ಸ್ಪರ್ಧಿಸಲಿ. ಇದರಿಂದ ಕಾಂಗ್ರೆಸ್ನ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಸುಲಭವಾಗಿ ಗೆಲ್ಲುತ್ತಾರೆ ಎಂದು ಹೇಳಿದರು.
ಮಾಜಿ ಶಾಸಕ ಗೋವಿಂದಪ್ಪ ಎಲ್ಲಿವರೆಗೆ ರಾಜಕಾರಣದಲ್ಲಿರುತ್ತಾರೆ ಅಲ್ಲಿವರೆಗೆ ನಾನಿರುತ್ತೇನೆ. ಅವರನ್ನು ಸೋಲಿಸುವುದು ನನ್ನೊಬ್ಬನಿಂದಲೇ ಮಾತ್ರ ಸಾಧ್ಯ ಎಂದರು. ಇನ್ನು 2008ರಲ್ಲಿ ಪಕ್ಷೇತರನಾಗಿ ಗೆದ್ದು ಬಿಜೆಪಿ ಬೆಂಬಲಿಸಿದವರಲ್ಲಿ ನಾನು ಮೊದಲಿಗನಾಗಿದ್ದು, ಆಗಲೂ ನನಗೆ ಅನ್ಯಾಯ ಆಗಿತ್ತು ಈಗ ಅನ್ಯಾಯ ಸರಿಪಡಿಸಲು ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದರು.