ಚಿತ್ರದುರ್ಗ: ಮಧ್ಯಪ್ರದೇಶ ಮೂಲದ ಕಾರ್ಮಿಕರು ಮಂಗಳೂರಿನಿಂದ ಹೊಸದುರ್ಗವರೆಗೆ 200ಕಿ.ಮೀ. ಕಾಲ್ನಡಿಗೆಯಲ್ಲೇ ಬಂದಿದ್ದಾರೆ. ಈಗಾಗಲೇ ಹೊಸದುರ್ಗ ತಲುಪಿರುವ ಕಾರ್ಮಿಕರು ತಮ್ಮನ್ನು ಮಧ್ಯಪ್ರದೇಶಕ್ಕೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಕೆಲಸವನ್ನರಸಿ ನಾನಾ ಜಿಲ್ಲೆಗಳಿಗೆ, ರಾಜ್ಯಗಳಿಗೆ ಹೋದ ಕಾರ್ಮಿಕರೀಗ ಲಾಕ್ಡೌನ್ನಿಂದ ಅಲ್ಲೇ ಸಿಲುಕಿಕೊಂಡಿದ್ದಾರೆ. ಕೆಲವರು ಕಾಲ್ನಡಿಗೆ ಮೂಲಕವೇ ತಮ್ಮ ತವರು ಜಿಲ್ಲೆ, ರಾಜ್ಯಗಳನ್ನು ತಲುಪುತ್ತಿದ್ದಾರೆ. ಹೀಗೆ ವಲಸೆ ಕಾರ್ಮಿಕರು ಮಂಗಳೂರಿನಿಂದ ಪಯಣ ಬೆಳೆಸಿ ಸದ್ಯ ಜಿಲ್ಲೆಯ ಹೊಸದುರ್ಗ ಪಟ್ಟಣ ತಲುಪಿದ್ದು, ನಿನ್ನೆಯಿಂದ ಹೊಸದುರ್ಗ ಬಳಿ ಮರವೊಂದರ ನೆರಳಿನಲ್ಲಿ ಒಟ್ಟು 9 ಜನ ಕೂಲಿ ಕಾರ್ಮಿಕರು ಆಶ್ರಯ ಪಡೆದಿದ್ದಾರೆ.
ಮಧ್ಯಪ್ರದೇಶಕ್ಕೆ ಕಳಿಸಿಕೊಡಿ ಎಂದು ಮನವಿ ಮಾಡುತ್ತಿರುವ ಕಾರ್ಮಿಕರ ಅಳಲನ್ನು ಆಲಿಸಿದ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇಂದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಆಶ್ರಯ ಕಲ್ಪಿಸಲು ಮುಂದಾಗಿದ್ದಾರೆ.