ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನ ಕಳವಿಭಾವಿ ಗ್ರಾಮದ ಜೀವನ್ಗೌಡ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ. ಜೀವನ್ಗೌಡ ಅವರ ಕುಟುಂಬದಲ್ಲಿ ಕಡುಬಡತನ. ಇವರಿಗೆ ವಿದ್ಯೆ ತಲೆಗೆ ಹತ್ತಲಿಲ್ಲ. ಬದುಕಿನ ಜಂಜಾಟದಲ್ಲಿ ಏನಾದರೂ ಮಾಡಿ ಸಾಧನೆ ಮಾಡಬೇಕೆಂಬ ಹಂಬಲ.
ಸಾಧನೆಗೆಂದು 17 ವರ್ಷದ ಹಿಂದೆ ಊರು ಬಿಟ್ಟು ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ತೊಡಗಿದ್ದಾರೆ. ಮೊದ ಮೊದಲಿಗೆ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಟೀ, ಕಾಫಿ ಕೊಡುವುದು, ಪಿಎ ಆಗಿ ಕೆಲಸ, ಫೋಟೋಗ್ರಾಫರ್ ಆಗಿ ಕೊನೆಗೆ ಛಾಯಾಗ್ರಾಹಕನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ಚಿತ್ರರಂಗದ ಬದುಕು ನನ್ನ ಬೆಳವಣಿಗೆಯನ್ನ ನಾನೇ ಹಿಂತಿರುಗಿ ನೋಡುವಂತೆ ಮಾಡಿದೆ ಎನ್ನುತ್ತಾರೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪುರಸ್ಕೃತ ಜೀವನ್ ಗೌಡ.
ಕೇರಳದ 7ನೇ ಆರ್ಟ್ ಇಂಡಿಪೆಂಡೆಂಟ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಹಾಗೂ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ಸ್ಟಾರ್ ಹಾಲಿವುಡ್ ಅವಾರ್ಡ್ಸ್ ಅಂತಾರಾಷ್ಟ್ರೀಯ ಫೀಲ್ಡ್ ಫೆಸ್ಟಿವಲ್ನಲ್ಲಿ ಅನಿರೀಕ್ಷಿತ ಚಿತ್ರದ 'ಅತ್ಯುತ್ತಮ ಛಾಯಾಗ್ರಾಹಕ'ನೆಂದು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಹಳೆಯ ಸೋರುತ್ತಿದ್ದ ಮಾಳಿಗೆ ಮನೆಯಲ್ಲಿ ವಾಸ. ಸಗಣಿಯಿಂದ ಸಾರಿಸುವ ನೆಲ. ತಂದೆ ತಾಯಿ ಕೃಷಿಯಲ್ಲಿ ಎಷ್ಟು ಕೆಲಸ ಮಾಡಿದರೂ ಸರಿಯಾಗಿ ಲಾಭ ಸಿಗುತ್ತಿರಲಿಲ್ಲ. ಕುಟುಂಬದಲ್ಲಿ ಕಡು ಬಡತನ, ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಮನೆಗೆ ಯಾರಾದರೂ ಬಂದರೆ ಕುಳಿತುಕೊಳ್ಳಲು ಒಂದು ಚೇರ್ ಕೂಡ ಇರಲಿಲ್ಲ.
ಪಕ್ಕದ ಮನೆಯಲ್ಲಿ ಮಿಕ್ಸಿ ಗ್ರೇಂಡರ್ ಇತ್ತು. ನಮ್ಮ ಮನೆಯಲ್ಲಿ ಇದೆಲ್ಲ ಯಾವಾಗ ಬರುತ್ತದೆ? ಎಂಬ ಚಿಂತೆ. ಅಂತದ್ರಲ್ಲಿ ಏನಾದರೂ ಮಾಡಿ ಸಾಧಿಸಬೇಕು. ಓದೋಣ ಎಂದರೆ ತಲೆಗೆ ವಿದ್ಯೆ ಹತ್ತಲಿಲ್ಲ. ಹಾಗಾಗಿ, ಪಿಯುಸಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದೆ.
ಗುರಿ ಸಾಧನೆಗೆ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡೆ. ತಾಳ್ಮೆಯಿಂದ ಚಿತ್ರರಂಗದಲ್ಲಿ ಕೆಲಸ ಮಾಡಿಕೊಂಡು ಇದ್ದಿದ್ದಕ್ಕೆ ನನಗೆ ಇಂದು ಚಿತ್ರೋದ್ಯಮ ಕೈ ಹಿಡಿದಿದೆ. ಪ್ರಶಸ್ತಿ ಬರಲು ಸಾಧ್ಯವಾಗಿದೆ ಎಂದಿದ್ದಾರೆ.

ಮೊದಲಿಗೆ "ಪುಟಾಣಿ ಸಫಾರಿ" ಮಕ್ಕಳ ಸಿನಿಮಾಕ್ಕೆ ಚಿತ್ರೀಕರಣ ಮಾಡಿದ್ದರು. ಈ ಸಿನಿಮಾ 125 ದಿನ ಯಶಸ್ವಿ ಪ್ರದರ್ಶನಗೊಂಡಿದೆ. ಕೈವಲ್ಯ, ವರ್ಣಮಯ, ಕ್ಲಿಕ್, ಅನಿರೀಕ್ಷಿತ ( ಪ್ರಶಸ್ತಿ ಪಡೆದುಕೊಂಡ ಚಿತ್ರ) ಮಠ ಹಾಗೂ ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ( ಸೆನ್ಸಾರ್ ಹೋಗಿದೆ) ಮಾಡಿದ್ದಾರೆ.
ಮಠ ಸಿನಿಮಾ ತೆರೆಮೇಲೆ ಬರಲು ಸಿದ್ಧವಾಗಿದೆ. ಈಗ ಸುಮಾರು 7 ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಹಲವು ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಜೀ ಕನ್ನಡದಲ್ಲಿ ಬರುತಿದ್ದ ಅಂಜಲಿ ಪ್ರಮುಖವಾದ ಧಾರಾವಾಹಿಯಾಗಿದೆ.

ಉಳಿದಂತೆ ಸಾಗರ ಸಂಗಮ, ಒಂದೇ ಗೂಡಿನ ಹಕ್ಕಿಗಳು, ಮುರುಳಿ ಮಿಲಿಟರಿ ಹೋಟೆಲ್, ಚಂದನದ ಗೊಂಬೆ, ಮನೆದೇವರು, ತ್ರಿವೇಣಿ ಸಂಗಮ, ಒಗ್ಗರಣೆ ಡಬ್ಬಿ ಇನ್ನು ಮುಂತಾದ ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಇದಲ್ಲದೆ, ರಿಯಾಲಿಟಿ ಶೋಗಳಲ್ಲಿ ಸಹ ಕ್ಯಾಮೆರಾಮೆನ್ ಆಗಿ ಚಿತ್ರೀಕರಿಸಿದ್ದಾರೆ. ಸೂಪರ್ ದಂಪತಿ ರಿಯಾಲಿಟಿ ಶೋ, ಬಿಲ್ ನಿಮ್ಮದು, ದುಡ್ಡು ನಮ್ಮದು ಸೇರಿದಂತೆ ಐದಾರು ರಿಯಾಲಿಟಿ ಶೋಗಳಲ್ಲಿ ಚಿತ್ರೀಕರಣ ಪೂರೈಸಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಜೀವನಕ್ಕೆ ತೊಂದರೆ ಇಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರಶಸ್ತಿ ಸಮಾರಂಭಕ್ಕೆ ಹೋಗಲು ಆಗದ ಕಾರಣ ಕೊರಿಯರ್ ಮೂಲಕ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನನಗೆ ತಲುಪಿಸಿದ್ದಾರೆ. ಈ ಪ್ರಶಸ್ತಿ ಬಂದಿರುವುದರ ಜೊತೆಗೆ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಸಾಧನೆ ಇನ್ನೂ ಬಾಕಿ ಇದೆ ಅಂತಾರೆ ಜೀವನ್ ಗೌಡ.
ಮೊಬೈಲ್ ನಂಬರ್: 9844222932 ಜೀವನ್ ಗೌಡ
ಓದಿ: ಹಣಕಾಸು ಸ್ಥಿತಿ ನೋಡಿಕೊಂಡು ಪೆಟ್ರೋಲ್, ಡೀಸೆಲ್ ಸುಂಕ ಇಳಿಕೆ ನಿರ್ಧಾರ: ಸಿಎಂ ಬೊಮ್ಮಾಯಿ