ಚಿತ್ರದುರ್ಗ : ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ಗೂ ಸೋಂಕು ಆವರಿಸುತ್ತಿದೆ. ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುವ ದಾದಿ (ನರ್ಸ್)ಗೆ ಕೊರೊನಾ ಬಂದಿರುವುದು ಗರ್ಭಿಣಿಯರು ಹಾಗೂ ಬಾಣಂತಿಯರ ಆತಂಕಕ್ಕೆ ಕಾರಣವಾಗಿದೆ.
ಸ್ತ್ರೀರೋಗ ತಜ್ಞರೊಬ್ಬರಿಗೆ ಕೊರೊನಾ ತಗುಲಿದ ಪರಿಣಾಮ ನರ್ಸ್ಗೆ ಇವರ ಸಂಪರ್ಕದಿಂದ ಸೋಂಕು ತಗುಲಿದೆ. ಈಗಾಗಲೇ ಸೋಂಕಿತ ವೈದ್ಯ ಗುಣಮುಖರಾಗಿದ್ದು, ಇತ್ತ ಸೋಂಕಿತ ದಾದಿ(ನರ್ಸ್) ಸಾಕಷ್ಟು ಹೆರಿಗೆಗಳನ್ನು ಮಾಡಿಸಿರುವುದು ಜಿಲ್ಲಾ ಆರೋಗ್ಯ ಇಲಾಖೆಗೆ ತಲೆ ಬಿಸಿಯಾಗಿದೆ. ಸೋಂಕಿತ ನರ್ಸ್ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 19 ಜನರ ಸ್ವ್ಯಾಬ್ ಟೆಸ್ಟ್ಗೆ ಕಳುಹಿಸಲಾಗಿದೆ. ಹೆರಿಗೆ ಮಾಡಿಸಿಕೊಂಡಿದ್ದ ಬಾಣಂತಿಯರು ಸಾಕಷ್ಟು ಆತಂಕಕ್ಕೊಳಗಾಗಿದ್ದಾರೆ.
ಸ್ತ್ರೀರೋಗ ತಜ್ಞರಿಗೆ ಸೋಂಕು ತಗುಲಿದ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಅಸಡ್ಡೆ ತೋರಿರುವುದು ಈ ಎಲ್ಲಾ ಸಮಸ್ಯೆಗೆ ಪ್ರಮುಖ ಕಾರಣ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನರ್ಸ್ ಹೆರಿಗೆ ಮಾಡಿಸಿದ ಬಳಿಕ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಹೆರಿಗೆ ಮಾಡಿಸಿಕೊಂಡಿರುವ ಬಾಣಂತಿಯರು ಹಾಗೂ ಪುಟ್ಟ ಪುಟ್ಟ ಕಂದಮ್ಮಗಳ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಳು ಬರಬೇಕಿದೆ. ಇದರಿಂದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲು ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರಂತೆ.