ಚಿತ್ರದುರ್ಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಗೆ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯಿಂದ ಆಗಮಿಸಿದವರಲ್ಲಿ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಬೆಂಗಳೂರು ಚಿತ್ರದುರ್ಗಕ್ಕೆ ಕಂಟಕ ಆಗುತ್ತಿದೆಯಾ ಎಂಬ ಅನುಮಾನ ಕಾಡತೊಡಗಿದೆ.
ಕೋಟೆನಾಡಿನಲ್ಲಿ ಸೋಂಕಿತರ ಸಂಖ್ಯೆ 270ಕ್ಕೆ ಏರಿಕೆಯಾಗಿದ್ದು, ಈವರೆಗೆ 7 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಬಂದವರಲ್ಲೇ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಬೆಂಗಳೂರು ಚಿತ್ರದುರ್ಗಕ್ಕೆ ಕಂಟಕ ಆಗುತ್ತಿದೆಯಾ ಎಂಬ ಅನುಮಾನ ಕಾಡತೊಡಗಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದ್ದ ಜನರು ಕೊರೊನಾ ಆತಂಕದಿಂದ ಹಳ್ಳಿಗಳತ್ತ ಧಾವಿಸುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಬೆಂಗಳೂರಿನಿಂದ ಆಗಮಿಸುವವರನ್ನು ಗಡಿ ಭಾಗದಲ್ಲೇ ತಪಾಸಣೆ ನಡೆಸಿ, ಹೋಂ ಕ್ವಾರಂಟೈನ್ ಸೀಲ್ ಹಾಕಿ ಮನೆಗೆ ಕಳುಹಿಸುತ್ತಿದ್ದಾರೆ. ಅವರನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ಹಾಕದಿರುವುದೇ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಲು ಬೆಂಗಳೂರಿನ ಟ್ರಾವೆಲ್ ಹಿಸ್ಟರಿಯೇ ಪ್ರಮುಖ ಕಾರಣವಾಗಿದ್ದು, ಮಾರ್ಚ್ ತಿಂಗಳಿನಿಂದ ಇಲ್ಲಿಯ ತನಕ ಸುಮಾರು 73,000 ಸಾವಿರ ಬೆಂಗಳೂರಿಗರು ಜಿಲ್ಲೆಗೆ ಆಗಮಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಟ್ರಾವೆಲ್ ಹಿಸ್ಟರಿಯಿಂದ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದರಿಂದ ಜಿಲ್ಲಾ ಅರೋಗ್ಯ ಇಲಾಖೆಗೂ ತಲೆ ನೋವಾಗಿ ಪರಿಣಮಿಸಿದೆ. 73 ಸಾವಿರ ಜನರು ಆಗಮಿಸಿದ್ದು, ಕೆಲವರನ್ನು ಮಾತ್ರ ಕ್ವಾರಂಟೈನ್ ಮಾಡಲಾಗಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಹಳ್ಳಿ-ಹಳ್ಳಿಗಳಿಗೂ ಆವರಿಸುತ್ತಾ ಎಂಬ ಭಯ ಹುಟ್ಟಿಸಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.