ಚಿತ್ರದುರ್ಗ: ಕೋಟೆನಾಡಿಗೆ ಹೊಸದಾಗಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ಹೊಸ ಜಾಗ ನಿಗದಿಪಡಿಸಲಾಗಿದೆ. ಈ ಕಟ್ಟಡ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ 4 ರ ಬಳಿಯ ಬೆಟ್ಟವನ್ನು ಸಮತಟ್ಟು ಮಾಡುವ ಕಾರ್ಯ ವೇಗವಾಗಿ ಸಾಗುತ್ತಿದೆ.
ಕಳೆದ ವಾರದ ಹಿಂದಷ್ಟೇ ಬೆಟ್ಟದಲ್ಲಿ ಬೃಹತ್ ಬಂಡೆ ಕಾಣಿಸಿಕೊಂಡಿದೆ. ಈ ಬಂಡೆ ತೆರವುಗೊಳಿಸಲು 5 ಕೋಟಿ ರೂ ಹಣವನ್ನು ಜಿಲ್ಲಾಡಳಿತ ಖರ್ಚು ಮಾಡಬೇಕು ಎಂದು ತಂತ್ರಜ್ಞರು ಸಲಹೆ ನೀಡಿದ್ದಾರೆ. ಇದರ ಬೆನ್ನಲ್ಲೇ ಗುಡ್ಡದ ಕೋಟಿ ಕೋಟಿ ಬೆಲೆ ಬಾಳುವ ಮಣ್ಣು ಲೂಟಿಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೋಟೆನಾಡಿಗೆ ಹೊಸದಾಗಿ ಆಡಳಿತ ಕಚೇರಿ ಸಂಕೀರ್ಣ ನಿರ್ಮಾಣ, ಜಿಲ್ಲೆಯ ಜನತೆಯ ಕೆಲಸ ಕಾರ್ಯಗಳಿಗೆ ಎಲ್ಲ ಕಚೇರಿಗಳು ಒಂದೇ ಸ್ಥಳದಲ್ಲಿ ಇರಬೇಕು ಎಂಬ ಉದ್ದೇಶಕ್ಕಾಗಿ ಸರ್ಕಾರ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಕಳೆದ ಒಂದೂವರೆ ವರ್ಷದ ಹಿಂದೆ ಹಸಿರು ನಿಶಾನೆ ತೋರಿದೆ.
ಚಿತ್ರದುರ್ಗ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಕುಂಚಿಗನಾಳ್ ಬೆಟ್ಟ ನೆಲಸಮ ನೆಲಸಮಗೊಳಿಸಿ 40 ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತ ಕಟ್ಟಡ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಒಟ್ಟು 45 ಕೋಟಿ ರೂ.ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಅಂಕಿತ ಕೂಡ ಹಾಕಲಾಗಿದೆ.
ಕಳೆದ 6 ತಿಂಗಳ ಹಿಂದೆ ಮುಂಗಡವಾಗಿ ಕಟ್ಟಡ ನಿರ್ಮಾಣಕ್ಕೆ 25 ಕೋಟಿ ರೂ. ಹಣ ಬಿಡುಗಡೆಗಾಗಿ, ಕಳೆದ ಒಂದೂವರೆ ತಿಂಗಳಿಂದ ಬೆಟ್ಟ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. ಬೆಟ್ಟ ಸಮತಟ್ಟು ಮಾಡಿ, ಬೆಟ್ಟದ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬಳಸಿಕೊಳ್ಳಲು, ಪಿಎನ್‌ಸಿ ಕಂಪನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಿಗೆ ಪಡೆದುಕೊಂಡಿದೆ. ಇತ್ತ ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಕೂಡ ಸರಬರಾಜು ಮಾಡುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪಿಎನ್‌ಸಿ ಕಂಪನಿ, ಮುಂಗಡವಾಗಿ 2 ಕೋಟಿ ರೂ. ಮಾತ್ರ ಪಾವತಿಸಿ, ನಾಲ್ಕೈದು ಕೋಟಿಯಷ್ಟು ಬೆಲೆಬಾಳುವ ಮಣ್ಣು ಸರಬರಾಜು ಮಾಡುತ್ತಿದೆ ಎಂದು ಚಿತ್ರದುರ್ಗ ನಗರ ಶಾಸಕ ತಿಪ್ಪಾರೆಡ್ಡಿ ಗಂಭೀರ ಆರೋಪ ಮಾಡುತ್ತಿದ್ದಾರೆ.
ಓದಿ: ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ ಜೀವನ ಯಾತ್ರೆ ಮುಗಿಸಿದ ವೃದ್ಧೆ
ಇತ್ತ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮಣ್ಣು ಸರಬರಾಜು ಮಾಡುವ ಕಂಪನಿಯಿಂದ ಹಣ ಪಾವತಿಸಿಕೊಳ್ಳದಿರುವುದು ಕೋಟಿ ಕೋಟಿ ಸಂಪತ್ತು ಪುಕ್ಕಟೆಯಾಗಿ ಲೂಟಿಗೆ ಕಾರಣ ಎಂದು ಶಾಸಕ ತಿಪ್ಪಾರೆಡ್ಡಿ ಆರೋಪಿಸಿದ್ದಾರೆ.
2 ಕೋಟಿ ಪಾವತಿಸಿ 5 ಕೋಟಿ ಬೆಟ್ಟದ ಸಂಪತ್ತು ಲೂಟಿ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಗೆ ಕುಂಚನಾಳ್ ಬೆಟ್ಟದ ಮಣ್ಣನ್ನು ಸರಬರಾಜು ಮಾಡುವ ಕಾರ್ಯಕ್ಕೆ ಪಿಎಂಸಿ ಕಂಪನಿಯಿಂದ, ಬೆಂಗಳೂರು ಮೂಲದ ಕೆಆರ್ಡಿ ಇನ್ಫಾಟೆಕ್ ಕಂಪನಿ ಟೆಂಡರ್ ಪಡೆದುಕೊಂಡಿದೆ. ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಬೆಟ್ಟದಲ್ಲಿರುವ ಮಣ್ಣನ್ನು ಹೆದ್ದಾರಿ ಕಾಮಗಾರಿಗೆ ಸರಬರಾಜು ಮಾಡುತ್ತಿದೆ. ಕಂಪನಿ ಕಡಿಮೆ ಶುಲ್ಕ ಪಾವತಿಸಿ, 5 ಕೋಟಿಗೂ ಅಧಿಕ ಬೆಲೆ ಬಾಳುವ ಬೆಟ್ಟದ ಮಣ್ಣು ಕೆ ಆರ್ ಡಿ ಇನ್ಫಾಟೆಕ್ ಕಂಪನಿ ಲೂಟಿ ಮಾಡಿದೆ ಎಂದು ಶಾಸಕ ತಿಪ್ಪಾರೆಡ್ಡಿ ಗರಂ ಆಗುತ್ತಿದ್ದಾರೆ. ಅಲ್ಲದೆ ಮಣ್ಣು ಲೂಟಿಯ ಕಾರ್ಯ ಈಗಲೂ ನಿರಂತರವಾಗಿ ಸಾಗುತ್ತಿದೆ ಎಂದು ಶಾಸಕ ದೂರುತ್ತಿದ್ದಾರೆ.
ಶಾಸಕನ ಮಾತಿಗೆ ಕಿವಿಗೊಡದ ಅಧಿಕಾರಿಗಳು
ಬೆಟ್ಟದ ಮಣ್ಣನ್ನು ಸರಬರಾಜು ಮಾಡುತ್ತಿರುವ ಕಂಪನಿಯಿಂದ ಶುಲ್ಕ ಪಾವತಿ ಮಾಡಿಕೊಳ್ಳುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹಲವು ಬಾರಿ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಸೂಚಿಸಿದ್ದರಂತೆ. ಇತ್ತ ಅಧಿಕಾರಿಗಳು ಶಾಸಕರ ಮಾತಿಗೆ ಕಿವಿಗೊಡುತ್ತಿಲ್ಲ ಎಂದು ಅಧಿಕಾರಿಗಳಿಗೆ ಮಾತಿನ ಬಿಸಿ ಮುಟ್ಟಿಸುತ್ತಿದ್ದಾರೆ. ಎಲ್ಲಾದರೂ ಮರಳು ಸಾಗಾಣಿಕೆ ನಡೆದರೆ ಅಧಿಕಾರಿಗಳು ತಕ್ಷಣ ಹಾಜರಿರುತ್ತಾರೆ. ಆದರೆ, ಕಣ್ಮುಂದೆ ಮಣ್ಣು ಲೂಟಿಯಾಗುತ್ತಿರುವುದು ಕಂಡರೂ, ಗಮನ ಹರಿಸುತ್ತಿಲ್ಲ ಎಂದು ಶಾಸಕ ಸಿಡಿಮಿಡಿಗೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನ ಹುಟ್ಟುಹಾಕಿದೆ.
ಓದಿ: ಚಿತ್ರದುರ್ಗ: ನೂತನ ಜಿಲ್ಲಾಡಳಿತ ಕಟ್ಟಡ ನಿರ್ಮಾಣಕ್ಕೆ ಬಂಡೆ ಅಡ್ಡಿ, 5 ಕೋಟಿ ರೂ. ಹೆಚ್ಚಿನ ಹೊರೆ
ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗುವಂತೆ ಸಾರ್ವಜನಿಕರ ಆಗ್ರಹ
ಕುಂಚಿಗನಾಳ್ ಬೆಟ್ಟದಲ್ಲಿ ನಿರಂತರವಾಗಿ ಕೋಟ್ಯಂತರ ಮೌಲ್ಯದ ಮಣ್ಣು ಸರಬರಾಜು ಆಗುತ್ತಿರುವುದಕ್ಕೆ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಡಳಿತ ಮಣ್ಣು ಸರಬರಾಜು ಮಾಡುವ ಕಂಪನಿಯಿಂದ ಪೂರ್ಣ ಪ್ರಮಾಣದ ಶುಲ್ಕ ಪಾವತಿಸಿಕೊಂಡು ಬೆಟ್ಟ ಅಗೆಯುವಂತೆ ಆಗ್ರಹಿಸಿದ್ದಾರೆ.
ಶುಲ್ಕ ಪಾವತಿಸಿಕೊಳ್ಳಲು ಹಿಂದೇಟು ಹಾಕಿದ್ರೆ ಕ್ರಮ
ನಿರಂತವಾಗಿ ಸರ್ಕಾರಿ ಜಾಗದ ಮಣ್ಣು ನೂರಾರು ಲಾರಿಗಳ ಮೂಲಕ ಸರಬರಾಜು ಆಗ್ತಿರೋದಕ್ಕೆ, ಕೆಂಡಾಮಂಡಲವಾದ ಶಾಸಕ ತಿಪ್ಪಾರೆಡ್ಡಿ, ತಕ್ಷಣವೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಂಪನಿಯಿಂದ ಶುಲ್ಕ ಪಾವತಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಇಲ್ಲವಾದರೆ 15 ದಿನಗಳಲ್ಲಿ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.