ಚಿತ್ರದುರ್ಗ: ಈಗಾಗಲೇ ಸಚಿವ ಸಂಪುಟ ವಿಸ್ತರಣೆಗೆ ಸಕಲ ಸಿದ್ಧತೆ ನಡೆದಿರುವ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿದೆ. ಚಿತ್ರದುರ್ಗದ ಹಿರಿಯ ಶಾಸಕ ತಿಪ್ಪಾರೆಡ್ಡಿ, ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಸಿಎಂ ಅವರಿಗೆ ಗೊತ್ತಿದೆ. ಈ ಬಾರಿ ಸಚಿವ ಸ್ಥಾನ ನನಗೆ ನೀಡುವ ನಂಬಿಕೆ ನಮ್ಮ ನಾಯಕರ ಮೇಲಿದೆ. ನಮ್ಮ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಆಸೆ ಕೂಡ ಆಗಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಚಿತ್ರದುರ್ಗ ಕೂಡ ಕಾರಣವಾಗಿತ್ತು. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಮೂರು ಬಾರಿ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ನಮ್ಮ ಜಿಲ್ಲೆಗೆ ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಇನ್ನೊಬ್ಬರ ಬಗ್ಗೆ ಹೇಳಿಕೆ ನೀಡಲು ನನಗೆ ಇಷ್ಟ ಇಲ್ಲ ಎಂದರು.
ನನ್ನನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಿ ಎಂದು ಕೇಳುವ ಅಭ್ಯಾಸ ನನಗಿಲ್ಲ. ದಿನನಿತ್ಯ ಅವರನ್ನು ಭೇಟಿಯಾಗಿ ಈ ವಿಚಾರ ಮಾತನಾಡುವುದು ಕೂಡ ಮುಜುಗರ ತರುತ್ತದೆ. ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಇಲ್ಲಿ ತನಕ ಸಿಕ್ಕಿಲ್ಲ. ಪ್ರತಿ ಬಾರಿಯು ಮಂತ್ರಿಯಾದವರೇ ಪ್ರತಿ ಸಲ ಮತ್ರಿಯಾಗುತ್ತಾರೆ. ಪ್ರತಿ ಬಾರಿ ಮಂತ್ರಿಯಾದವರಿಗೆ ಮಣೆ ಹಾಕುವುದಕ್ಕಿಂತ ಹೊಸಬರಿಗೆ ಮಂತ್ರಿ ಸ್ಥಾನ ನೀಡುವುದು ಸೂಕ್ತ ಎಂದು ಹೇಳಿದರು.