ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ವಸತಿ ರಹಿತರಿಗೆ ನಿವೇಶನ ಕಲ್ಪಿಸಲು, ಸರ್ಕಾರ ಪ್ರತಿ ಬಜೆಟ್ನಲ್ಲಿ ಕೋಟಿ ಕೋಟಿ ಹಣ ಮೀಸಲಿಡುತ್ತದೆ. ಆದರೆ ಆ ಯೋಜನೆ ಬಡವರ ಕೈಸೇರದೆ, ಉಳ್ಳವರ ಪಾಲಾಗುತ್ತಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆರೋಪಿಸಿದ್ದಾರೆ.
ಸರ್ಕಾರಿ ಯೋಜನೆಯ ಹೆಸರಿನಲ್ಲಿ ಕೆಲವರು ಒಂದಕ್ಕಿಂತ ಹೆಚ್ಚು ನಿವೇಶನ ಪಡೆದು ಬಾಡಿಗೆಗೆ ನೀಡುತ್ತಿದ್ದಾರೆ. ಇದಲ್ಲದೆ ಒಬ್ಬೊಬ್ರು ಮೂರ್ನಾಲ್ಕು ಮನೆಗಳನ್ನು ಪಡೆದು, ಬಾಡಿಗೆ ವಸೂಲಿ ಶುರು ಮಾಡಿದ್ದಾರೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಮುಖ್ಯವಾಗಿ ಉಳ್ಳವರೇ ಬಡವರ ಯೋಜನೆಗೆ ಕನ್ನ ಹಾಕುತ್ತಿದ್ದಾರಂತೆ. ಆದರೆ ಯಾರ ಕೈವಾಡದಿಂದ ಸರ್ಕಾರದ ಯೋಜನೆ ಶ್ರೀಮಂತರಿಗೆ ಸಿಗ್ತಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಕೆಲವರು ಸೂರಿಗಾಗಿ ಪ್ರತಿ ವರ್ಷ ಅರ್ಜಿ ಹಾಕಿದರೂ ಮನೆ ಸಿಗುತ್ತಿಲ್ಲ ಎಂದು ಕೆಲವರು ಡಿಸಿ ಕಚೇರಿ ಮುಂದೆ ಪ್ರತಿಭಟಿಸುತ್ತಿದ್ದಾರೆ. ಪ್ರತಿ ವರ್ಷ ಜಿಲ್ಲೆಗೆ ಬಿಡುಗಡೆಯಾಗುವ ವಸತಿ ಯೋಜನೆಗಳು ಎಲ್ಲಿ ಹೋಗುತ್ತವೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ನೈಜ ಫಲಾನುಭವಿಗಳು ಮನೆಗಾಗಿ ಕಚೇರಿ ಬಾಗಿಲಿಗೆ ಹೋದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆರೋಪಿಸುತ್ತಿದ್ದಾರೆ.
ಶಾಸಕ ತಿಪ್ಪಾರೆಡ್ಡಿ ವಸತಿ ಯೋಜನೆಯ ಕರ್ಮಕಾಂಡ ಬಿಚ್ಚಿಟ್ಟಿದ್ದಾರೆ. ಶ್ರೀಮಂತರು, ಉಳ್ಳವರು ಸರ್ಕಾರದ ಮನೆಗಳನ್ನು ಪಡೆದು, ಅವುಗಳನ್ನು ಬಡವರಿಗೆ ಬಾಡಿಗೆ ನೀಡಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಬಡವರ ಏಳಿಗೆಗೆ ಇರಬೇಕಾದ ಸರ್ಕಾರಿ ವಸತಿ ಯೋಜನೆ, ಸದ್ಯ ಕೋಟೆನಾಡಿನಲ್ಲಿ ಉಳ್ಳವರ ಪಾಲಾಗುತ್ತಿದೆ ಎಂದು ಸ್ವತಃ ಶಾಸಕರೇ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ನೈಜ ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲು ಮುಂದಾಗಬೇಕಿದೆ.