ಚಿತ್ರದುರ್ಗ : ಲಾರಿಯಲ್ಲಿ ಮಲಗಿದ್ದ ವ್ಯಕ್ತಿಗೆ ಚಾಕು ತೋರಿಸಿ 7 ಸಾವಿರ ದೋಚಿದ್ದ ಖದೀಮರನ್ನು ಚಳ್ಳಕೆರೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ನಿವಾಸಿಗಳಾದ ಮೊಹಮ್ಮದ್ ನೂರುಲ್ಲಾ (26), ಇಬ್ರಾನ್ ಮುನ್ನಾ (23) ಬಂಧಿತರು.
ಈಚೆಗೆ ಲಾರಿ ಚಾಲಕ ಚಳ್ಳಕೆರೆ ಪಟ್ಟಣದ ಬಳಿ ಲಾರಿ ನಿಲ್ಲಿಸಿ ಮಲಗಿಕೊಂಡಿದ್ದ. ಈ ವೇಳೆ ಇಬ್ಬರು ಖದೀಮರು ಚಾಲಕನಿಗೆ ಜೀವ ಬೆದರಿಕೆ ಹಾಕಿ, ಹಣ ಕಿತ್ತುಕೊಂಡಿದ್ದರು. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಗಸ್ತು ತಿರಗುವ ಸಮಯಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ ವ್ಯಕ್ತಿಗಳನ್ನು ವಿಚಾರಿಸಿದಾಗ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ₹ 6,650 ನಗದು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ ಚಾಕು, ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ನಕಲಿ ಕ್ರಿಮಿನಾಶಕ ಮಾರುತ್ತಿದ್ದ ವ್ಯಕ್ತಿ ಬಂಧನ: ಪರ್ಟಿಲೈಸರ್ ಕಂಪನಿಗಳ ಹೆಸರು ಬಳಸಿ ರೈತರಿಗೆ ನಕಲಿ ಕ್ರಿಮಿನಾಶಕ ಔಷಧ ಮಾರಾಟ ಮಾಡುತ್ತಿದ್ದ, ನಾಯಕನಹಟ್ಟಿ ನಿವಾಸಿ ಆರೋಪಿ ಬಿ.ಟಿ ಶಿವಾರೆಡ್ಡಿ (45) ಜೈಲಿಗಟ್ಟಲಾಗಿದೆ. ಪರವಾನಗಿ ಅಮಾನತು ಮಾಡಲಾಗಿದೆ. ಈ ಕುರಿತು ನಾಯಕಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳ್ಳ ಜೈಲಿಗೆ; 3 ಬೈಕ್ ಜಪ್ತಿ: ದ್ವಿಚಕ್ರ ವಾಹನ ಕದ್ದು ಪರಾರಿಯಾಗುತ್ತಿದ್ದ ಆಂಧ್ರಪ್ರದೇಶ ಮೂಲದ ಆರೋಪಿ ಶ್ರೀಧರ ರಂಗಪ್ಪನನ್ನು (31) ಬಂಧಿಸಿ 3 ಬೈಕ್ ವಶಕ್ಕೆ ಪಡೆಯಲಾಗಿದೆ. ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಗಸ್ತಿನಲ್ಲಿದ್ದಾಗ ಬೈಕ್ನಲ್ಲಿ ಬರುತ್ತಿದ್ದ ಆರೋಪಿ, ಪೊಲೀಸರನ್ನು ಕಂಡು ಗಾಬರಿಗೊಳಗಾಗಿ ಹಿಂತಿರುಗಲು ಯತ್ನಿಸಿದ್ದಾನೆ.
ಆಗ ಪೊಲೀಸರು ಆತನನ್ನು ತಡೆದು ವಿಚಾರಣೆ ನಡೆಸಿದಾಗ ನಗರದ ಶ್ರೀನಿವಾಸ್ ಬಾರ್ ಮುಂದೆ ನಿಲ್ಲಿಸಿದ್ದ ಪ್ಯಾಷನ್ ಪ್ರೋ, ಚಳ್ಳಕೆರೆಯ ಸೋಮಗುದ್ದು ರಸ್ತೆಯಲ್ಲಿ ನಿಲ್ಲಿಸಿದ ಹೀರೋ ಹೊಂಡ ಹಾಗೂ ತುಮಕೂರು ಜಿಲ್ಲೆಯಲ್ಲಿ ಒಂದು ಬೈಕ್ ಕಳ್ಳತನ ಮಾಡಿವುದಾಗಿ ಒಪ್ಪಿಕೊಂಡಿದ್ದಾನೆ. ವಶಕ್ಕೆ ಪಡೆದ ಮೂರು ಬೈಕ್‌ಗಳ ಪೈಕಿ ಎರಡನ್ನು ಕೆಎಚ್‌ಬಿ ಕಾಲೊನಿ ವಸತಿ ಗೃಹ ಹತ್ತಿರ ಜಾಲಿ ಗಿಡಗಳ ನಡುವೆ ನಿಲ್ಲಿಸಿದ್ದ ಎಂದು ಎಸ್ಪಿ ರಾಧಿಕಾ ಮಾಹಿತಿ ನೀಡಿದರು.