ಚಿತ್ರದುರ್ಗ: ನಗರದ ಪಾಳು ಬಿದ್ದ ಮನೆಯೊಂದರಲ್ಲಿ 5 ಅಸ್ಥಿಪಂಜರ ಪತ್ತೆ ಕೇಸ್ಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪತ್ತೆಯಾಗಿರುವ ಐವರ ಅಸ್ಥಿಪಂಜರಗಳ ಮರಣೋತ್ತರ ಪರೀಕ್ಷೆಯನ್ನು ಇಂದು ವೈದ್ಯಕೀಯ ಸಿಬ್ಬಂದಿ ನಡೆಸಲಿದ್ದಾರೆ. ಜೊತೆಗೆ, ಶವ ಗುರುತು ಪತ್ತೆಗಾಗಿ ಡಿಎನ್ಎ ಟೆಸ್ಟ್ ಕೂಡ ನಡೆಸುವ ಸಾಧ್ಯತೆ ಇದೆ. ನಗರದ ಜೆಎಂಐಟಿ ಆವರಣದಲ್ಲಿರುವ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ವರದಿ ಬಂದ ಬಳಿಕ ಅವರು ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬರಲಿದೆ.
ತನಿಖೆ ಚುರುಕುಗೊಳಿಸಿದ ಅಧಿಕಾರಿಗಳು: ಬಡಾವಣೆ ಪೊಲೀಸ್ ಠಾಣೆಯವರು ಈ ಪ್ರಕರಣದ ಕೂಲಂಕಷ ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ, ಇಬ್ಬರಿಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಬಡಾವಣೆ ಠಾಣೆ ಸಿಪಿಐ ನಯೀಮ್ ನೇತೃತ್ವದಲ್ಲಿ ತನಿಖೆ ಸಾಗುತ್ತಿದೆ.
ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳು ಬೆಳಕಿಗೆ ಬಂದಿವೆ. ಇದು ಜಗನ್ನಾಥ ರೆಡ್ಡಿ ಎಂಬುವರ ಮನೆಯಾಗಿದೆ. ಮನೆಯಲ್ಲಿ ವ್ಹೀಲ್ ಚೇರ್, ಮೆಡಿಸಿನ್ ಹಾಗೂ ಆಕ್ಸಿಜನ್ ಸಿಲಿಂಡರ್ ಸಿಕ್ಕಿವೆ. ಈ ಮನೆಯಲ್ಲಿ ಜಗನ್ನಾಥ ರೆಡ್ಡಿ ಅವರ ಪತ್ನಿ ಪ್ರೇಮಾ ಮತ್ತು ಮಕ್ಕಳಾದ ತ್ರಿವೇಣಿ, ಕೃಷ್ಣ ರೆಡ್ಡಿ, ನರೇಂದ್ರ ರೆಡ್ಡಿ ಎಂಬವರು ವಾಸವಾಗಿದ್ದರು. ಈ ಐವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಶ್ವಾನದ ಅಸ್ಥಿಪಂಜರವೂ ದೊರೆತಿದೆ. ಈಗಾಗಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲ ಎಫ್ಎಸ್ಎಲ್ ತಂಡ ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಎಸ್ಪಿ ಪ್ರತಿಕ್ರಿಯೆ: ಚಿತ್ರದುರ್ಗ ಎಸ್ಪಿ ಧಮೇಂದರ್ ಕುಮಾರ್ ಪ್ರತಿಕ್ರಿಯಿಸಿ, "ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಮನೆ ಪರಿಶೀಲಿಸಿದಾಗ 5 ಅಸ್ಥಿಪಂಜರಗಳು ಪತ್ತೆಯಾಗಿವೆ. ಒಂದು ರೂಮಿನಲ್ಲಿ ನಾಲ್ಕು, ಇನ್ನೊಂದು ರೂಮಿನಲ್ಲಿ ಒಂದು ಅಸ್ಥಿಪಂಜರ ದೊರೆತಿದೆ. ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರ ಅಸ್ಥಿಪಂಜರ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ" ಎಂದು ಮಾಹಿತಿ ನೀಡಿದ್ದರು.
ಓದಿ: ಚಿತ್ರದುರ್ಗದಲ್ಲಿ ಐವರ ಅಸ್ತಿಪಂಜರ ಪತ್ತೆ ಪ್ರಕರಣ: ಎಸ್ಪಿ ಹೇಳಿದ್ದೇನು?