ಚಿತ್ರದುರ್ಗ: ಬರ ಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಭರಪೂರ ಮಳೆಯಾಗಿದೆ. ಜಿಲ್ಲಾದ್ಯಂತ ವಿವಿಧ ಬೆಳೆ ಬಿತ್ತನೆಯಾಗಿದ್ದರಿಂದ ಫಸಲು ಕೈಗೆ ಬರುವ ಹಂತ ತಲುಪಿದ್ದು, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.
ಶಾಶ್ವತ ನೀರಾವರಿ ಇಲ್ಲದೇ ಮಳೆಗಾಗಿ ಕಾದು ಕೂತು ಬಿತ್ತನೆ ಮಾಡುತ್ತಿದ್ದ ಅನ್ನದಾತನಿಗೆ ಈ ಬಾರಿ ವರುಣ ಕೈ ಹಿಡಿದಿದ್ದಾನೆ. ಜಿಲ್ಲೆಯಲ್ಲಿ ಒಣ ಭೂಮಿ ಹೆಚ್ಚಿರುವುದರಿಂದ ರೈತರು ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದರು. ಈ ಭಾಗದಲ್ಲಿ ಮಳೆಗಾಲದಲ್ಲೂ ಮಳೆ ಮಾತ್ರ ಮರೀಚಿಕೆಯಾಗಿತ್ತು. ಆದರೆ, ಈ ಬಾರಿ ಮುಂಗಾರು ರೈತರ ಕೈ ಹಿಡಿದಿದ್ದು, ಎರಡು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆಯುವ ಮುಖೇನ ತೆನೆ ಕಾಳು ಕಟ್ಟುತ್ತಿದೆ.
ಮಳೆ ಇಲ್ಲ ಎಂಬ ರೈತರ ಕೊರಗನ್ನು ವರುಣ ದೂರ ಮಾಡಿದ್ದು, ಈರುಳ್ಳಿ, ಶೇಂಗಾ, ಧನಿಯಾ, ಮೆಕ್ಕೆಜೋಳ, ರಾಗಿ, ಸೂರ್ಯಕಾಂತಿ ಮುಂತಾದ ಬೆಳೆಗಳು ಬೆಳೆದು ನಿಂತಿದ್ದು, ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ. ಅದರೆ ಕೆಲ ರೈತರು ಬೆಳೆದಿರುವ ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ.
ಹನಿ ನೀರಿಲ್ಲದೇ ಭಣಗುಡುತ್ತಿದ್ದ ಕೆರೆ ಕಟ್ಟೆಗಳು, ತೊರೆಗಳು, ಚೆಕ್ ಡ್ಯಾಂಗಳು ಸೇರಿದಂತೆ ವೇದಾವತಿ ನದಿ ಉತ್ತಮ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದೆ. ಇದರಿಂದ ಬೋರ್ವೆಲ್ಗಳಲ್ಲಿ ನೀರು ಹೆಚ್ಚಾಗಿದೆ. ಅದೆಷ್ಟೋ ಬೋರ್ವೆಲ್ಗಳು ರೀಚಾರ್ಜ್ ಆಗಿದ್ದು, ಈ ಭಾಗದ ರೈತರ ಕೈ ಹಿಡಿದಿವೆ.
12 ವರ್ಷಗಳಿಂದ ಮಳೆ ಇಲ್ಲದೇ ಹೈರಾಣಾಗಿದ್ದ ರೈತರಿಗೆ ಈ ಬಾರಿ ವರುಣ ಕೃಪೆ ತೋರುವ ಮೂಲಕ ಉಡುಗೊರೆ ನೀಡಿದ್ದಾನೆ. ಮಳೆ - ಬೆಳೆ ಇಲ್ಲದೇ, ಸಾಲ ಸೋಲ ಮಾಡಿದ್ದ ರೈತರಿಗೆ ಈ ಬಾರಿ ಲಾಭ ಬರುವುದಂತೂ ಸುಳ್ಳಲ್ಲ.