ಚಿತ್ರದುರ್ಗ: ಟೋಲ್ಗಳಲ್ಲಿ ಅವ್ಯವಹಾರ ತಡೆಯಲು ಮತ್ತು ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಫಾಸ್ಟ್ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಟೋಲ್ ಗೇಟ್‌ಗಳಲ್ಲಿ ಕಂಡು ಬರುತ್ತಿರುವ ತೊಂದರೆಗಳಿಂದ ಸರಾಗ ಸಂಚಾರ ಸಾಧ್ಯವಾಗದ ಕಾರಣ ವಾಹನ ಸವಾರರು ಹೈರಾಣಾಗಿದ್ದಾರೆ. ಇದು ತುರ್ತು ಸೇವೆಗಳಿಗೂ ತೀವ್ರ ಅಡ್ಡಿಯಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಐಮಂಗಲ ಟೋಲ್‌ನಲ್ಲಿ ಫಾಸ್ಟ್ಟ್ಯಾಗ್ ಸಾಫ್ಟ್ವೇರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಸವಾರರು ನಗದು ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಿಲೋ ಮೀಟರ್ಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಗಂಟೆಗಟ್ಟಲೆ ನಿಲ್ಲುವ ಮೂಲಕ ಇಂಧನ ಮತ್ತು ಸಮಯ ಹಾಳಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.
ಈ ಫಾಸ್ಟ್ಟ್ಯಾಗ್ ಸಮಸ್ಯೆಯೊಂದೇ ಅಲ್ಲ, ನಗದು ಪಾವತಿಸುವಲ್ಲಿಯೂ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಸವಾರರು ಸರಾಗವಾಗಿ ಸಾಗುವುದಕ್ಕೆ ಅಡಚಣೆ ಉಂಟಾಗಿದೆ. ಈ ಅವ್ಯವಸ್ಥೆ ಸವಾರರು ಮತ್ತು ಟೋಲ್ ಸಿಬ್ಬಂದಿ ನಡುವೆ ಜಟಾಪಟಿಗೂ ಕಾರಣವಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಲು ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಸವಾರರು, ಈ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.