ಚಿತ್ರದುರ್ಗ: ಕೊರೊನಾ ಹೊಡೆತಕ್ಕೆ ಸರ್ಕಾರಿ ಶಾಲೆಗಳನ್ನು ತೆರೆಯಲು ಸರ್ಕಾರ ಹಿಂದೇಟು ಹಾಕುತ್ತಿದ್ದು, ಶಾಲೆಗೆ ತೆರಳಲು ಮಕ್ಕಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಸರ್ಕಾರಿ ಶಾಲೆಗೆ ಆಗಮಿಸುವ ಮಕ್ಕಳಿಗೆ ಅವಶ್ಯಕವಾಗಿರುವ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಜಿಲ್ಲೆಯ ಶೇ.50 ರಷ್ಟು ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.
ಕೋಟೆ ನಾಡು ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ನಗರ ಪ್ರದೇಶಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವುದು ಇಲ್ಲಿ ಸರ್ವೇಸಾಮಾನ್ಯ. ಇದರ ಬಿಸಿ ಸರ್ಕಾರಿ ಶಾಲೆಗಳಿಗೂ ತಟ್ಟಿದ್ದು, ಚಿತ್ರುದುರ್ಗದ ಕೆಲ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಒಟ್ಟು 2,512 ಸರ್ಕಾರಿ ಶಾಲೆಗಳಲ್ಲಿದ್ದು, ಕೆಲ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಿಕ್ಷಣ ಇಲಾಖೆ ನೀಗಿಸಿದೆ. ಆದ್ರೆ, ಶೇ 50% ರಷ್ಟು ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದರಿಂದ ಮಕ್ಕಳು ನೀರಿಗೆ ಮನೆ ಮನೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ತೊಲಗಿಸಲು ಜಿಲ್ಲಾಡಳಿತ ಕೂಡ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲವಂತೆ. ಶೇ.100 ರಷ್ಟು ಶಾಲೆಗಳ ಪೈಕಿ ಶೇ.50 ರಷ್ಟು ಸರ್ಕಾರಿ ಶಾಲೆಗಳಲ್ಲಿ ಸಮರ್ಪಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದ್ದು, ಶೇ.25ರಷ್ಟು ಶಾಲೆಗಳಲ್ಲಿ ಫಿಲ್ಟರ್ ಹಾಗೂ ಡ್ರಮ್ಗಳಲ್ಲಿ ಶೇಖರಣೆ ಮಾಡಿ ಕುಡಿಯುವ ಪರಿಸ್ಥಿತಿ ಇದ್ದು, ಇನ್ನುಳಿದ ಶೇ% 25 ರಷ್ಟು ಶಾಲೆಗಳಲ್ಲಿ ಹೊರಗಡೆಯಿಂದ ತಂದು ಶಾಲೆಯ ಮಕ್ಕಳು ಕುಡಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಇನ್ನು ಪ್ರಸ್ತುತವಾಗಿ ನೀರಿನ ಸಮಸ್ಯೆ ಎದುರಾಗಿದ್ದರಿಂದ ಸಮಸ್ಯೆ ಹೋಗಲಾಡಿಸಲು ಜಿಲ್ಲಾ ಪಂಚಾಯತ್ ಸಿಇಓ ಯೋಗೇಶ್ ಮುಂದಾಗಿದ್ದಾರಂತೆ. ಇದೀಗ ಶಾಲೆಗಳನ್ನು ಆರಂಭಿಸಲು ರಾಜ್ಯದಲ್ಲಿ ಚರ್ಚೆ ನಡೆಯುತ್ತಿದ್ದು, ಸರ್ಕಾರ ಶಾಲೆಗಳನ್ನು ಆರಂಭಿಸುವ ಮುನ್ನ ಮಕ್ಕಳಿಗೆ ಬಿಸಿ ಊಟ ಸೇವಿಸಿದ ಬಳಿಕ ನೀರು ಸೇವಿಸಲು ಎದುರಾಗಿರುವ ನೀರಿನ ಸಮಸ್ಯೆಯನ್ನು ನೀಗಿಸಲು ನರೇಗಾ ಯೋಜನೆಯಡಿಯಲ್ಲಿ ಯೋಜನೆ ರೂಪಿಸಲಾಗಿದೆಯಂತೆ. ಇನ್ನು ಜಿಲ್ಲೆಯಲ್ಲಿ ಶೇ%50 ರಷ್ಟು ಸರ್ಕಾರಿ ಶಾಲೆಗಳಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಿ ಕುಡಿಯುವ ನೀರನ್ನು ನೀಡಿ ಎಂದು ಪೋಷಕರು ಆಗ್ರಹಿಸಿದ್ದಾರೆ.
ಒಟ್ಟಾರೆ ಜಿಲ್ಲೆಯ 2,512 ಶಾಲೆಗಳಿದ್ದು, ಅದರಲ್ಲಿ ಶೇ%50 ರಷ್ಟು ಶಾಲೆಯ ಮಕ್ಕಳು ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಜಿಲ್ಲಾಡಳಿತ ತಕ್ಷಣ ಈ ಸಮಸ್ಯೆಯನ್ನು ಸರಿದೂಗಿಸಿ ಮಕ್ಕಳಿಗೆ ಸ್ವಚ್ಛ ಕುಡಿಯುವ ನೀರನ್ನು ಪೂರೈಸಬೇಕಾಗಿದೆ.