ಚಿತ್ರದುರ್ಗ: ಇಲ್ಲಿಯ ಜಿಲ್ಲಾ ಕಾರಾಗೃಹ ಜೈಲರ್ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಚಂದ್ರಪ್ಪ ಎಂಬ ಬಂಧಿತ ಆರೋಪಿ ನೀಡಿರುವ ದೂರು ಆಧರಿಸಿ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲರ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಜೈಲರ್ ಶ್ರೀಮಂತಗೌಡ ಪಾಟೀಲ್ ಎಂಬುವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು, ನೋಟಿಸ್ ತಲುಪಿದ ಒಂದು ವಾರದೊಳಗೆ ಖುದ್ದು ಹಾಜರಾಗಿ ಉತ್ತರಿಸುವಂತೆ ಸೂಚನೆ ನೀಡಿದೆ.
ನ್ಯಾಮತಿ ಠಾಣಾ ವ್ಯಾಪ್ತಿಯ ಅಪರಾಧ ಪ್ರಕರಣವೊಂದರ ಹಿನ್ನೆಲೆ ಬಂಧನದಲ್ಲಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚಿಲೂರು ಗ್ರಾಮದ ಆರೋಪಿ ಚಂದ್ರಪ್ಪ, ಜೈಲರ್ ಶ್ರೀಮಂತಗೌಡ ಪಾಟೀಲ್ ವಿರುದ್ಧ ದೂರು ನೀಡಿದ್ದರು. ನನಗೆ ಜಾತಿ ಆಧರಿತ ಹಿಂಸೆ ನೀಡಿದ್ದು ಮತ್ತು ಥಳಿಸಿದ್ದಾರೆ ಎಂದು ತಮ್ಮ ವಕೀಲರ ಮೂಲಕ ಆರೋಪಿ ಚಂದ್ರಪ್ಪ ಕೋರ್ಟ್ಗೆ ಲಿಖಿತ ದೂರು ನೀಡಿದ್ದರು. ಆರೋಪಿಯ ದೂರು ಪರಿಶೀಲಿಸಿದ ಜಿಲ್ಲಾ ಕೋರ್ಟ್, ಜೈಲರ್‌ಗೆ ನೋಟಿಸ್ ಜಾರಿ ನೀಡಿದೆ. ನೋಟಿಸ್ ತಲುಪಿದ ವಾರದೊಳಗೆ ಖುದ್ದಾಗಿ ಹಾಜರಾಗುವಂತೆಯೂ ಸೂಚನೆ ನೀಡಿದೆ.
ಕಳೆದ ಒಂದು ವರ್ಷದ ಹಿಂದೆ ದಾವಣಗೆರೆ ಜೈಲಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ತನ್ನನ್ನು ವರ್ಗಾಯಿಸಲಾಗಿದೆ. ಆದರೆ, ಈ ಜೈಲಿನಲ್ಲಿರುವ ಅಧಿಕಾರಿಯು ತನಗೆ ಹಿಂಸೆ ನೀಡುತ್ತಿದ್ದಾರೆ. ಹಾಗಾಗಿ ತನ್ನನ್ನು ಚಿತ್ರದುರ್ಗ ಜೈಲಿನಿಂದ ಪುನಃ ದಾವಣಗೆರೆ ಜೈಲಿಗೆ ಶಿಫ್ಟ್ ಮಾಡುವಂತೆ ಚಂದ್ರಪ್ಪ ತಮ್ಮ ದೂರು ಪ್ರತಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು: ಬೆಳಗಾವಿ ಎಸ್ಪಿ ಆದೇಶ