ಚಿತ್ರದುರ್ಗ: ಸಚಿವ ಶ್ರೀರಾಮುಲು ಅವರಿಗೆ ಸ್ವಕ್ಷೇತ್ರದಲ್ಲಿಯೇ ಭಾರಿ ಹಿನ್ನಡೆಯಾಗಿದೆ. ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 16 ವಾರ್ಡ್ಗಳಲ್ಲಿ ಕಾಂಗ್ರೆಸ್ 11 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದೆ. ಉಳಿದಂತೆ, ಮೂವರು ಪಕ್ಷೇತರ ಅಭ್ಯರ್ಥಿಗಳು ಹಾಗೂ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ಧಾರೆ.
ಗೆದ್ದಿರುವ ಮೂವರು ಪಕ್ಷೇತರ ಅಭ್ಯರ್ಥಿಗಳಾದ ದುರ್ಗಪ್ಪ, ಕುಮಾರ್, ಉಮಾಪತಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಬಿಜೆಪಿ ತೆಕ್ಕೆಯಲ್ಲಿದ್ದ ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಇದೀಗ ಕಾಂಗ್ರೆಸ್ ಬಹುಮತ ಪಡೆಯುವುದರ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ. ಶ್ರೀರಾಮುಲು ಎದುರು ಪರಾಭವಗೊಂಡಿದ್ದ ಯೋಗಿಶ್ ಬಾಬು ನೇತೃತ್ವದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಯೋಗಿಶ್ ಬಾಬು, 'ಈ ಗೆಲುವು ನಮ್ಮ ಪಕ್ಷದ ಗೆಲುವು. ಕ್ಷೇತ್ರದ ಜನರು ಸಚಿವ ಶ್ರೀರಾಮುಲು ಅವರ ಆಡಳಿತವನ್ನು ವಿರೋಧಿಸಿದ್ದಾರೆ. ಕ್ಷೇತ್ರದಲ್ಲಿ ಶೂನ್ಯ ಅಭಿವೃದ್ಧಿ, ಆಪ್ತ ಸಲಹೆಗಾರರ ದರ್ಬಾರ್, ಕ್ಷೇತ್ರದಲ್ಲಿ ಮಿತಿ ಮೀರಿದ ವರ್ತನೆ ನೋಡಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಹೊರಗಿನಿಂದ ಬಂದು ಗೆದ್ದು, ಶಾಸಕನಾಗಿ ಮಂತ್ರಿಯಾದ ಶ್ರೀರಾಮುಲು ಅವರಿಗೆ ಇದೊಂದು ಪಾಠ. ಶ್ರೀರಾಮುಲು ಅವರ ಕ್ಷೇತ್ರಕ್ಕಿಂತ ಬೇರೆ ಕ್ಷೇತ್ರಗಳ ಮೇಲೆ ಪ್ರೀತಿ. ಅವರು ಈಗಿಂದಲೇ ಬೇರೆ ಕ್ಷೇತ್ರ ನೋಡಿಕೊಳ್ಳಲಿ' ಎಂದು ಹೇಳಿದರು.
ಇದನ್ನೂ ಓದಿ: ಅಥಣಿ ಪುರಸಭೆ ಚುನಾವಣೆ ಫಲಿತಾಂಶ: ಗೆಲುವು ಪಡೆದ ಅಭ್ಯರ್ಥಿಗಳ ಸಂಭ್ರಮ