ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು.
ಐದು ತಿಂಗಳ ಮಗುವಿನ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ ನಂತರ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಇಡೀ ಪ್ರಪಂಚದಲ್ಲೇ ಭಾರತ ಅತಿಹೆಚ್ಚು ಲಸಿಕೆ ನೀಡಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲೇ ಲಸಿಕೆ ಕಂಡುಹಿಡಿದು ಬೇರೆ ದೇಶಗಳಿಗೆ ಲಸಿಕೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಲಸಿಕೆ ಹಾಕಿಸಿಕೊಂಡವರಿಗೆ ಕೋವಿಡ್ ಬಂದರೂ ಸಾವು ಸಂಭವಿಸುವುದಿಲ್ಲ. ಅದನ್ನು ತಡೆಯುವ ಶಕ್ತಿ ಲಸಿಕೆಗೆ ಇದೆ. ಓರ್ವ ಮಹಿಳೆಯನ್ನು ಶಾಸಕಿಯಾಗಿ ಆಯ್ಕೆ ಮಾಡಿದ್ದಕ್ಕೆ ಹಿರಿಯೂರು ತಾಲೂಕಿಗೆ ಇಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲಭಿಸಿದೆ ಎಂದು ಹೇಳುತ್ತಾ ಶಾಸಕಿ ಕೆ. ಪೂರ್ಣಿಮಾ ಅವರನ್ನು ಆರೋಗ್ಯ ಸಚಿವರು ಹೊಗಳಿದರು.
ಎನ್‌ಎಚ್‌ಐ ಅಡಿಯಲ್ಲಿ ಹಿರಿಯೂರಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಮೂರನೇ ಅಲೆಯ ಮಧ್ಯದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಒಂದು ಸಂದೇಶ ರವಾನಿಸಿದೆ ಎಂದರು.
ಇದನ್ನೂ ಓದಿ: ಸಿಎಂ ಮನೆ ಮುಂದೆ ಕಾನ್ಸ್ಟೇಬಲ್ಗಳಿಂದ ಗಾಂಜಾ ಮಾರಾಟ : ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಅಮಾನತು
ಚಿತ್ರದುರ್ಗ ಜಿಲ್ಲೆಯಲ್ಲಿ ಎರಡೂವರೆ ತಿಂಗಳಲ್ಲಿ 700 ರಿಂದ 750 ಹಾಸಿಗೆಯುಳ್ಳ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇನ್ನು ರಾಜ್ಯದಲ್ಲಿ 250 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತಪ್ಪು ವರದಿ ಕೊಡುವ ಲ್ಯಾಬ್ಗಳ ಲೈಸೆನ್ಸ್ ರದ್ದು: ಬೆಂಗಳೂರು ಏರ್ಪೋರ್ಟ್ನಲ್ಲಿ ವಿಮಾನ ಪ್ರಯಾಣಿಕರಿಗೆ ತಪ್ಪು ವರದಿ ನೀಡುವ ಮೂಲಕ ಕೋವಿಡ್ ಟೆಸ್ಟ್ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಂತಹ ಘಟನೆ ಬಗ್ಗೆ ಗಮನಕ್ಕೆ ಬಂದಿಲ್ಲ. ಹಾಗೆನಾದರೂ ಕಂಡುಬಂದಲ್ಲಿ ಅಂತಹ ಲ್ಯಾಬ್ಗಳ ಲೈಸೆನ್ಸ್ ರದ್ದುಗೊಳಿಸಿ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಚಿವರು ನೀಡಿದರು.