ಚಿತ್ರದುರ್ಗ : ಕೊರೊನಾ ಎರಡನೇ ಅಲೆ ತಡೆಗೆ ಅಧಿಕಾರಿಗಳು ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಮಾಸ್ಕ್, ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ಮುಂದಾದ ಅಧಿಕಾರಿಗಳ ಜೊತೆ ಸಾರ್ವಜನಿಕರು ವಾಗ್ವಾದಕ್ಕಿಳಿದು ಕೈ-ಕೈ ಮಿಲಾಯಿಸಲು ಮುಂದಾಗುತ್ತಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿ ಬೆಳಗ್ಗೆಯಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು. ಆದರೆ, ಸಾರ್ವಜನಿಕರು ಮಾತ್ರ ನಮಗೇನು ಕೊರೊನಾ ಬಂದಿದೆಯಾ? ಅನ್ನೋ ರೀತಿ ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಇಲ್ಲದೆ ವರ್ತಿಸುತ್ತಿದ್ದಾರೆ.
ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಮತ್ತು ನಗರಸಭೆ ಆಯುಕ್ತರು ಖುದ್ದು ಬೀದಿಗಿಳಿದು ನಿಯಮ ಉಲ್ಲಂಘಿಸಿದವರಿಗೆ ದಂಡದ ಬಿಸಿ ಮುಟ್ಟಿಸಿದರು.
ಅಧಿಕಾರಿಗಳ ಜೊತೆ ವಾಗ್ವಾದ : ಈ ವೇಳೆ ದಂಡ ಕಟ್ಟಲು ಆಗದ ಕೆಲವರು ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದರು. ಇನ್ನೂ ಕೆಲವರು ರೌಡಿಗಳ ರೀತಿ ಅಧಿಕಾರಿಗಳ ಜೊತೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋದರು. ಇಷ್ಟು ದಿನ ಸುಮ್ಮನಿದ್ದು ಈಗ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಒಂದು ವರ್ಷದಿಂದ ಮಾಸ್ಕ್ ಕಡ್ಡಾಯ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ದಂಡ ವಸೂಲಿ ಮಾಡಿ ಸರ್ಕಾರ ನಡೆಸೋಕೆ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಮಾಸ್ಕ್ ಹಾಗೂ ಸಾಮಾಜಿಕ ಅಂತದ ಬಗ್ಗೆ ಜಾಗೃತಿ ಮೂಡಿಸಲು ನಿಯಮ ಉಲ್ಲಂಘನೆ ಆದಲ್ಲಿ ದಂಡ ವಿಧಿಸುವ ಬಗ್ಗೆಯೂ ನಗರಸಭೆ ವತಿಯಿಂದ ಆಟೋ ಅನೌನ್ಸ್ಮೆಂಟ್ ಮಾಡಿಸಿದ್ದೇವೆ. ಆದ್ರೆ, ಜನರು ಮಾತ್ರ ಜಾಗೃತರಾಗುತ್ತಿಲ್ಲ.
ಹೀಗಾಗಿ, ಮಾಸ್ಕ್ ಹಾಕದವರಿಗೆ 100 ರೂ. ದಂಡ ವಸೂಲಿ ಮಾಡುತ್ತಿದ್ದೇವೆ. ಸಾಮಾಜಿಕ ಅಂತ ಕಾಪಾಡದ ವ್ಯಾಪಾರಸ್ಥರಿಗೂ ದಂಡ ವಿಧಿಸುತ್ತಿದ್ದೇವೆ ಎಂದು ನಗರಸಭೆ ಆಯುಕ್ತ ಹನುಮಂತರಾಯಪ್ಪ ಹೇಳಿದರು.