ಚಿತ್ರದುರ್ಗ: ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದ ಮದುವೆಯೊಂದು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ತೆಗೆದುಕೊಂಡ ದಿಢೀರ್ ನಿರ್ಧಾರದಿಂದ ಮುರಿದು ಬಿದ್ದಿದೆ. ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಗುರುವಾರ ಇಂಥದ್ದೊಂದು ವಿಚಿತ್ರ ಘಟನೆ ನಡೆಯಿತು.
ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ವಧು, ವರ, ಬಂಧು, ಬಾಂಧವರು ಅಲ್ಲಿ ಸೇರಿದ್ದರು. ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಧಾರ್ಮಿಕ ಶಾಸ್ತ್ರಗಳು ನಡೆದು ವರ ವಧುವಿಗೆ ತಾಳಿ ಕಟ್ಟಬೇಕಿತ್ತು. ಈ ಸಂದರ್ಭದಲ್ಲಿ ವಧು ಮದುವೆ ನಿರಾಕರಿಸಿದ್ದಾಳೆ. ಹೀಗಾಗಿ ಮದುವೆ ಸಂಪೂರ್ಣ ಮುರಿದುಬಿದ್ದಿದೆ.
ತಾಳಿ ಕಟ್ಟುತ್ತಿದ್ದಂತೆ ವರನನ್ನು ತಡೆದ ವಧು, ಈ ಮದುವೆ ನನಗೆ ಇಷ್ಟವಿಲ್ಲ ಎಂದು ಹೇಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ವಧುವಿನ ಮನವೊಲಿಸಲು ಹಿರಿಯರು, ಸಂಬಂಧಿಕರು ಹರಸಾಹಸಪಟ್ಟರು. ಹೀಗಿದ್ದರೂ ವಧು ಒಪ್ಪಲಿಲ್ಲ.
ಯುವತಿಯ ನಡೆಗೆ ಯುವಕನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ವಾಗ್ವಾದ ನಡೆಸಿದ್ದು, ಘಟನೆ ಶ್ರೀರಾಂಪುರ ಪೊಲೀಸ್ ಠಾಣೆ ತಲುಪಿತು. ಮದುವೆ ವೆಚ್ಚವನ್ನು ವಧುವಿನ ಕಡೆಯವರೇ ಭರಿಸಬೇಕು ಎಂಬ ರಾಜಿ ಪಂಚಾಯಿತಿಯೊಂದಿಗೆ ಪ್ರಕರಣ ಇತ್ಯರ್ಥಗೊಂಡಿದೆ.
"ವಧು ಮೊದಲೇ ತನ್ನ ಮನಸ್ಸಿನಲ್ಲಿರುವುದನ್ನು ಹೇಳಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ತಂದೆ-ತಾಯಿ ಅಥವಾ ಸಂಬಂಧಿಕರ ಮುಂದೆಯಾದರೂ ಹೇಳಿಕೊಳ್ಳಬಹುದಿತ್ತು. ಆದರೆ, ಯಾರ ಬಳಿಯೂ ಹೇಳಿರಲಿಲ್ಲ. ತಾಳಿ ಕಟ್ಟುತ್ತಿದ್ದಾಗ ದಿಢೀರ್ ಎಂದು ತಡೆದಿದ್ದರಿಂದ ಹುಡುಗ ಮತ್ತು ಆತನ ಕಡೆಯವರ ಪರಿಸ್ಥಿತಿ ಏನಾಗಬೇಕು? ಸಮಾಜದಲ್ಲಿ ಹೆಣ್ಣು ಸಿಗುವುದೇ ಕಷ್ಟ. ಈ ರೀತಿಯಾದರೆ ಗಂಡು ಮಕ್ಕಳ ಪರಿಸ್ಥಿತಿ ಹೇಗೆ?" ಎಂದು ಸ್ಥಳೀಯರೊಬ್ಬರು ಹೇಳಿದರು.
ಇದನ್ನೂ ಓದಿ: ಹಾಸನದಲ್ಲಿ ಶಾಲಾ ಶಿಕ್ಷಕಿ ಅಪಹರಣ ಕೇಸ್ ಸುಖಾಂತ್ಯ: ಮದುವೆ ನಿರಾಕರಿಸಿದ್ದಕ್ಕೆ ಕಿಡ್ನ್ಯಾಪ್ ಮಾಡಿದ ಸಂಬಂಧಿಕನ ಬಂಧನ
ಇತ್ತೀಚಿನ ಘಟನೆ: ಇತ್ತೀಚೆಗೆ ಹಾಸನದಲ್ಲಿ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕಾಗಿ ಶಾಲೆಯ ಮುಂಭಾಗದಲ್ಲೇ ಶಿಕ್ಷಕಿಯನ್ನು ಅಪಹರಿಸಿದ ಘಟನೆ ನಡೆದಿತ್ತು. ಖಾಸಗಿ ಶಾಲೆಯ ಶಿಕ್ಷಕಿಯನ್ನು ಸಂಬಂಧಿ ರಾಮು ಎಂಬಾತ ಇಬ್ಬರ ಸಹಾಯದಿಂದ ಕಾರಿನಲ್ಲಿ ಅಪಹರಿಸಿದ್ದ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖಾ ತಂಡ ರಚಿಸಿದ ಪೊಲೀಸರು, ಮಹಿಳೆಯನ್ನು ಕೊಡಗಿನಲ್ಲಿ ಪತ್ತೆ ಮಾಡಿದ್ದರು.