ಚಿತ್ರದುರ್ಗ: ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ಯಮ ಸ್ವರೂಪಿಯಂತೆ ಬಂದ ಮೈನ್ಸ್ ಲಾರಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ ದ್ವಿಚಕ್ರ ವಾಹನಕ್ಕೆ ಮೈನ್ಸ್ ಲಾರಿ ಅಪ್ಪಳಿಸಿದ ರಭಸಕ್ಕೆ ಪತಿ, ಗರ್ಭಿಣಿ ಪತ್ನಿ ಹಾಗೂ ಓರ್ವ ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮಗುವಿನ ಆಗಮನದ ಕನಸು ಕಂಡಿದ್ದ ತಂದೆ-ತಾಯಿ ಯಾರೂ ಬಾರದ ಲೋಕಕ್ಕೆ ಪಯಣಿಸಿದ್ದು, ಪ್ರಪಂಚ ಕಾಣುವ ಮೊದಲೇ, ಹಸುಗೂಸು ಗರ್ಭದಲ್ಲೇ ಇಹಲೋಕ ತ್ಯಜಿಸಿರುವ ಮನ ಕಲಕುವ ಘಟನೆಗೆ ಕೋಟೆನಾಡು ಸಾಕ್ಷಿಯಾಗಿದೆ.
ಪತಿ ಮಹಾತೇಂಶ್ (28), ಪತ್ನಿ ದೀಪಾ ಬಾಯಿ (21) ಹಾಗೂ ಮಹಾತೇಂಶ್ ಅಣ್ಣನ ಮಗ ಚೇತನ್ (08) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಯ ಗಾಜು ಹೊಡೆದು ಶಾಶ್ವತ ಪರಿಹಾರಕ್ಕಾಗಿ ಬೇಡಿಕೆಯನ್ನಿಟು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇನ್ನು ಪ್ರತಿಭಟನೆಯಲ್ಲಿ ನಿರತರಾದ ಮೃತರ ಸಂಬಂಧಿಕರ ಮನವೋಲಿಸಲು ಎಸ್ಪಿ ಡಾ. ಅರುಣ್ ಮುಂದಾದರು. ಈ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಡಿಆರ್ ವ್ಯಾನ್ ತುಕಡಿ ಸಮೇತ ಹಿರೇಗುಂಟನೂರು ಗ್ರಾಮಕ್ಕಾಗಮಿಸಿದ ಪೋಲಿಸರು ನೆರೆದಿದ್ದ ಜನರನ್ನು ಚದುರಿಸಿದರು.
ಇನ್ನು ಅಪಘಾತ ನಡೆದ ಸ್ಥಳದಲ್ಲೇ ಈವರೆಗೆ ಸುಮಾರು 10 ಕ್ಕೂ ಹೆಚ್ಚು ಪ್ರಕರಣಗಳು ನಡೆದಿದ್ದು, ಅಪಘಾತ ಸಂಭವಿಸಿದ ಬಳಿಕ ಪರಿಹಾರ ನೀಡುವ ತನಕ ಶವ ಎತ್ತಲು ಬಿಡಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು. ಇನ್ನು ಜಿಲ್ಲಾಧಿಕಾರಿ ಸ್ಥಳ್ಕಕಾಗಮಿಸುವಂತೆ ಬೇಡಿಕೆ ಇಟ್ಟ ಪ್ರತಿಭಟನಾಕಾರರೊಂದಿಗೆ ಶಾಸಕ ತಿಪ್ಪಾರೆಡ್ಡಿ ಮಾತನಾಡಿದರು. ಸಭೆ ಮಾಡುವ ಮೂಲಕ ಒಂದು ಪ್ರಮುಖ ತೀರ್ಮಾನಕ್ಕೆ ಬರಲಾಗುವುದೆಂದು ಶಾಸಕರ ಮಾತಿಗೆ ತಲೆಬಾಗಿ ಶವ ಸಾಗಿಸಲು ಸ್ಥಳೀಯರು ಅನುವು ಮಾಡಿಕೊಟ್ಟರು. ಮೈನಿಂಗ್ ಲಾರಿಗಳ ಹಾವಳಿಯಿಂದ ಬೇಸತ್ತಿರುವ ಸ್ಥಳೀಯರು ಸಂಚಾರವನ್ನು ಸ್ಥಗಿತಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಒಟ್ಟಾರೆ ಮೈನಿಂಗ್ ಲಾರಿ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಇಬ್ಭಾಗವಾಗಿ, ಮೂವರನ್ನು ಬಲಿಪಡೆದುಕೊಂಡಿದೆ. ಈ ಭಾಗದ ಮೈನ್ಸ್ ಲಾರಿ ಚಾಲಕರ ಡೆಡ್ಲಿ ಡ್ರೈವಿಂಗ್ಗೆ ಜನಸಾಮಾನ್ಯರು ಬೆಚ್ಚಿಬಿದ್ದಿದ್ದು, ಗರ್ಭಿಣಿ ಸೇರಿದಂತೆ ಮೂರು ಜನ ಕೊನೆಯುಸಿರೆಳೆದಿರುವುದು ದುರಂತವೇ ಸರಿ.