ಚಿತ್ರದುರ್ಗ: ಮುರುಘಾ ಮಠದ 2021ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ಯಾಂಡಲ್ವುಡ್ನ ಹೆಸರಾಂತ ನಟ ಮತ್ತು ಸಾಂಸ್ಕೃತಿಕ ರಾಯಭಾರಿ ದಿ. ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗಿದ್ದು, ಅಶ್ವಿನಿ ಪುನೀತ್ರಾಜ್ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಬಸವ ಜಯಂತಿ ದಿನವಾದ ಇಂದು ಚಿತ್ರದುರ್ಗ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು. ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಸ್ಮರಣ ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಬಸವಶ್ರೀ ಪ್ರಶಸ್ತಿಯನ್ನು ಕೊಡುವ ಮೂಲಕ ಅವರ ಕುಟುಂಬಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಪುನೀತ್ ಅವರು ನಟರಾಗಿ, ನಿರ್ಮಾಕಪರಾಗಿ, ಸಾಂಸ್ಕೃತಿಕ ರಾಯಭಾರಿ ಮಾನವೀಯ ಕಳಕಳಿಯ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ತಂದೆಯ ಮಾರ್ಗದರ್ಶನ ಆಂತರ್ಯದಲ್ಲಿಟ್ಟುಕೊಂಡು ಆಕಾಶದ ಎತ್ತರಕ್ಕೆ ಬೆಳೆದರು. ಅವರಂತಹ ಪ್ರತಿಭೆಯನ್ನು ಕಂಡ ನಾವುಗಳೇ ಧನ್ಯರು ಎಂದು ಅವರ ಗುಣಗಳನ್ನು ಕೊಂಡಾಡಿದರು.
ಸಚಿವ ಬಿ.ಸಿ. ಪಾಟೀಲ್, ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಸಿಇಒ ನಂದಿನಿ ದೇವೆ, ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ್ ಉಪಸ್ಥಿತರಿದ್ದರು.