ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಾವಿರಾರು ರೂಪಾಯಿ ಮೌಲ್ಯದ ಔಷಧಗಳನ್ನ ಕದ್ದು, ಮನೆಯಲ್ಲೇ ಖಾಸಗಿ ಕ್ಲಿನಿಕ್ ತೆರೆದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ.
ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿವೇಕಾನಂದ ಬಂಧಿತ ಆರೋಪಿ. ಸರ್ಕಾರದಿಂದ ನೀಡುವ ಔಷಧಿ, ಇಂಜೆಕ್ಷನ್, ಮಾತ್ರೆಗಳು, ಸಿರೆಂಜ್ಗಳನ್ನು ದುರುಪಯೋಗ ಮಾಡಿಕೊಂಡು ಜವನಗೊಂಡನಹಳ್ಳಿಯ ತನ್ನ ನಿವಾಸದಲ್ಲಿ ಅನಧಿಕೃತವಾಗಿ ಖಾಸಗಿ ಕ್ಲಿನಿಕ್ ತೆರೆದು, ರೋಗಿಗಳಿಗೆ ಮಾರಾಟ ಮಾಡಿ ಹಣಗಳಿಸುತ್ತಿದ್ದ.
ಸರ್ಕಾರಿ ಆಸ್ಪತ್ರೆಯ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸುತ್ತಿದ್ದ ಆರೋಪಿ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿರಿಯೂರು ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ, ಸಿಪಿಐ ರಾಘವೇಂದ್ರ, ಟಿಎಚ್ಓ ಡಾ. ವೆಂಕಟೇಶ್ ನೇತೃತ್ವದ ಜಂಟಿ ತಂಡ ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.