ಚಿತ್ರದುರ್ಗ : ಮೋಜಿಗಾಗಿ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳು ಮತ್ತು ಹೊರವಲಯದಲ್ಲಿ ಕೆಲ ದಿನಗಳಿಂದ ಬೈಕ್ನಲ್ಲಿ ಸಂಚರಿಸುವ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಸರಗಳ್ಳತ ಮಾಡುತ್ತಿದ್ದರು.
ಮುದ್ದಾಪುರದ ಉಮೇಶ್ ಹಾಗೂ ಉದಯ್ ಕುಮಾರ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಇವರ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳಿಂದ 8,50,000 ರೂ. ಬೆಲೆ ಬಾಳುವ 190 ಗ್ರಾಂ ತೂಕದ 9 ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ 1,50,000 ರೂ. ಬೆಲೆ ಬಾಳುವ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಉಮೇಶ್ ಪ್ರತಿಷ್ಟಿತ ಕುಟುಂಬದವನಾಗಿದ್ದು, ಓದು ಬರಹ ಬಿಟ್ಟು ತಂದೆ ತಾಯಿ ಮಾತು ಕೇಳದೆ ನಾನಾ ರೀತಿಯ ದುಶ್ಚಟಗಳನ್ನು ಕಲಿತಿದ್ದ. ಪಲ್ಸರ್ ಬೈಕ್ನಲ್ಲಿ ಸರಗಳ್ಳತನ ಮಾಡುವುದನ್ನು ಆರಂಭಿಸಿದ್ದ. ಕೆಲವೊಮ್ಮೆ ಒಬ್ಬಂಟಿಗನಾಗಿ ಮತ್ತು ಕೆಲವೊಮ್ಮೆ ತನ್ನ ಸ್ನೇಹಿತರಾದ ಉದಯ್ ಕುಮಾರ್ ಮತ್ತು ಕೀರ್ತಿಯೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗುತ್ತಿದ್ದ.
ಇವರ ಜೊತೆಗೆ ಕಳ್ಳತನದ ಮಾಲನ್ನು ಸ್ವೀಕರಿಸಿದ ಆರೋಪದ ಮೇಲೆ ಬಂಗಾರದ ಅಂಗಡಿ ಮಾಲೀಕ ವಿನಯ್ ಮತ್ತು ಮತ್ತೊಬ್ಬ ವ್ಯಕ್ತಿ ಯಶವಂಶ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.