ಚಿತ್ರದುರ್ಗ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿನ ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಆ್ಯಂಬುಲೆನ್ಸ್ವೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಆ್ಯಂಬುಲೆನ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಮೃತರು ಆ್ಯಂಬುಲೆನ್ಸ್ನಲ್ಲಿದ್ದ ಕನಕಮಣಿ (72), ಆಕಾಶ್ (17) ಮತ್ತು ಆ್ಯಂಬುಲೆನ್ಸ್ ಚಾಲಕ ಸಾವು ಎಂದು ಗುರುತಿಸಲಾಗಿದೆ. ಇವರು ಅಹಮದಾಬಾದ್ನಿಂದ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ವಾಹನದ ಸಂಖ್ಯೆ ಗಮನಿಸಿದಾಗ ರಾಜಸ್ಥಾನದ ಬಿಕನೇರ್ ಮೂಲಕದ ಆ್ಯಂಬುಲೆನ್ಸ್ ಎಂದು ತಿಳಿದು ಬಂದಿದೆ.
ಗುಜರಾತ್ನ ಅಹಮದಾಬಾದ್ನಲ್ಲಿ ತಮಿಳುನಾಡಿನ ತಿರುನಲ್ವೇಲಿ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅವರ ಶವವನ್ನು ಅಹಮದಾಬಾದ್ನಿಂದ ತಿರುನಲ್ವೇಲಿಗೆ ಆ್ಯಂಬುಲೆನ್ಸ್ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಿನ ಜಾವ ಚಿತ್ರದುರ್ಗದ ಮಲ್ಲಾಪುರ ಬಳಿ ಹಾದು ಹೋಗುವಾಗ ರಸ್ತೆ ಬಳಿ ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಡಿಕ್ಕಿ ರಭಸಕ್ಕೆ ಆ್ಯಂಬುಲೆನ್ಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಸ್ಥಳೀಯರು ಮತ್ತು ಸವಾರರು ರಕ್ಷಣೆ ಕೈಗೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲು ವ್ಯವಸ್ಥೆ ಮಾಡಿದರು.
ಇನ್ನು ಪೊಲೀಸರು ವಾಹನದಿಂದ ಮೂವರ ಶವಗಳನ್ನು ಹೊರಕ್ಕೆ ತೆಗೆದರು. ಬಳಿಕ ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಮತ್ತೊಂದು ರೈಲು ದುರಂತ.. ಚಾಲಕನ ಸಮಯ ಪ್ರಜ್ಞೆಯಿಂದ ಬದುಕುಳಿದ ನೂರಾರು ಜೀವಗಳು!
ನಿಂತ ಲಾರಿಗೆ ವಾಹನ ಡಿಕ್ಕಿ, ಐದು ಜನ ಸಾವು: ಮಂಗಳವಾರದಂದು ಯಾದಗಿರಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು. ಅಷ್ಟೇ ಅಲ್ಲ ಈ ಅಪಘಾತದಲ್ಲಿ 13 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರನ್ನು ಮುನೀರ್ (40), ನಯಮ್ತ್ ಉಲ್ಲಾ (40), ಮೀಜಾ (50), ಮುದ್ದಸಿರ್ (12) ಮತ್ತು ಸುಮ್ಮಿ (13) ಎಂದು ಗುರುತಿಸಲಾಗಿತ್ತು. ಇವರು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ವೇಲಗೋಡು ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದ್ದು, ಕಲಬುರುಗಿಯಲ್ಲಿ ನಡೆಯುತ್ತಿರುವ ದರ್ಗಾ ಉರುಸ್ ಜಾತ್ರೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿತ್ತು. ಈ ವೇಳೆ, ನಿಂತಿದ್ದ ಲಾರಿಗೆ ಇವರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ವಾಹನದಲ್ಲಿ ಸುಮಾರು 18 ಜನರು ಪ್ರಯಾಣಿಸುತ್ತಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಅಪಘಾತ ಸಂಭವಿಸುತ್ತಿದ್ದ ಕೂಡಲೇ ಸ್ಥಳೀಯರು ಮತ್ತು ವಾಹನ ಸವಾರರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ವಾಹನದಲ್ಲಿದ್ದ ಗಾಯಾಳುಗಳ ಆರೈಕೆ ಮಾಡಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಕೈಗೊಂಡರು. ವಾಹನದಿಂದ ಮೃತದೇಹಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.