ಚಿತ್ರದುರ್ಗ: ಕೇಂದ್ರ ಸರ್ಕಾರದ ಆದೇಶ ಧಿಕ್ಕರಿಸಿ ಟೋಲ್ ಸಿಬ್ಬಂದಿ ವಾಹನ ಸವಾರರಿಂದ ಹಣ ಪಡೆದುಕೊಂಡು ವಾಹನಗಳನ್ನ ಹೊರ ಬಿಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ ಟೋಲ್ನಲ್ಲಿ ನಗದು ರಹಿತ ವ್ಯವಹಾರ ನಡೆಸಲು ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದೆ. ಇತ್ತ ಹಿರಿಯೂರು ತಾಲೂಕಿನ ಗುಯಿಲಾಳು ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿ ಪ್ರಯಾಣಿಕರಿಂದ ಹಣ ಪಡೆದುಕೊಂಡು ವಾಹನ ಬಿಡುತ್ತಿದ್ದಾರೆ. ಗುಯಿಲಾಳು ಟೋಲ್ ಪ್ಲಾಜಾದಲ್ಲಿ ಒಟ್ಟು12 ಲೈನ್‌ಗಳಿದ್ದು, ಈ ಪೈಕಿ 10 ನಗದು ಕೌಂಟರ್‌ಗಳು ಹಾಗೂ ಇನ್ನುಳಿದ 2 ಕೌಂಟರ್‌ಗಳು ಪಿಐಪಿ ಲೈನ್‌ಗಳಿದ್ದು, ಕೇಂದ್ರ ಸರ್ಕಾರ ಬರುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದೆ. ಆದರೆ ಗುಯಿಲಾಳು ಟೋಲ್ ಪ್ಲಾಜಾದಲ್ಲಿ ಮಾತ್ರ 10 ಕೌಂಟರ್ಗಳಲ್ಲಿ ಫಾಸ್ಟ್ ಟ್ಯಾಗ್ ಇಲ್ಲದೇ ಬರುವ ವಾಹನಗಳಿಗೆ ಟೋಲ್ ಸಿಬ್ಬಂದಿ ಹಣ ಪಡೆದುಕೊಂಡು ವಾಹನಗಳನ್ನು ಬಿಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮುಂಬೈ-ಪುಣೆ ಹೆದ್ದಾರಿಯಲ್ಲಿ ಭೀಕರ ಅಪಘಾತ: ಐವರ ಸಾವು
ಟೋಲ್ ಮುಂಭಾಗದಲ್ಲಿ ಫಾಸ್ಟ್ ಟ್ಯಾಗ್ ನೋಂದಣಿ ಮಾಡಿಸಲು ಕೆಲವು ಚಾಲಕರು ಈಗಾಗಲೇ ಮುಗಿಬಿದ್ದಿದ್ದರು. ಆನ್ಲೈನ್ ನೋಂದಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಫಾಸ್ಟ್ ಟ್ಯಾಗ್ ನೋಂದಣಿ ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರ್ಕಾರ ಏಕಾಏಕಿ ನಗದು ರಹಿತ ಆದೇಶ ಮಾಡಿರುವುದು ಸೂಕ್ತವಲ್ಲವೆಂದು ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.