ಚಿತ್ರದುರ್ಗ: ಅನಾಥ ಮಕ್ಕಳ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಬಾಲನ್ಯಾಯ ಕಾಯ್ದೆಯನ್ನು ಮಕ್ಕಳ ಪಾಲನಾ ಸಂಸ್ಥೆಗಳು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳೆ ಮತ್ತು ಮಕ್ಕಳ ಸಾಗಾಟ ತಡೆ ಕುರಿತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ’ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲನ್ಯಾಯ ಕಾಯ್ದೆಯಡಿ ಅನಾಥ ಮಕ್ಕಳಿಗೆ ಹಾಗೂ ಏಕ ಪೋಷಕ ಮಕ್ಕಳಿಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಒಂದು ಕುಟೀರ 25 ಮಕ್ಕಳನ್ನು ಒಳಗೊಂಡಿರುತ್ತದೆ.
ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಮಲಗುವ ಕೋಣೆ, ಅಡುಗೆ ಕೋಣೆ, ಊಟದ ಹಾಲ್, ಶೌಚಾಲಯ, ಸ್ನಾನದ ಗೃಹ, ಸಿಸಿ ಕ್ಯಾಮೆರಾ, ಗೃಹ ಮಾತೆ ಅಥವಾ ಗೃಹ ಪಾಲಕರು, ಆಪ್ತ ಸಮಾಲೋಚಕರು, ಅಡುಗೆ ಸಹಾಯಕರು, ಜವಾನರು, ಸ್ವಚ್ಛತಾ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಶುದ್ಧ ಕುಡಿಯುವ ನೀರಿನ ಘಟಕ, ಅಗ್ನಿ ನಂದಕ ಸಲಕರಣೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಭದ್ರತಾ ಸಿಬ್ಬಂದಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ಪೊಲೀಸ್ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿಗಳು ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ಬಾಲನ್ಯಾಯಕಾಯ್ದೆ ಪಾಲಿಸದಿರುವ ಸಂಸ್ಥೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಖಡಕ್ ವಾರ್ನಿಂಗ್ ನೀಡಿದ್ದಾರೆ.