ಚಿಕ್ಕಮಗಳೂರು: ಪ್ರೀತಿ ಪ್ರೇಮದ ನಾಟಕವಾಡಿ ಮೋಸ ಮಾಡುವವರ ನಡುವೆ ನಿಜವಾದ ಪ್ರೇಮಿಗಳು ಸಿಗುವುದು ಅಪರೂಪ. ಅಂತದ್ದರಲ್ಲಿ ಇಲ್ಲೋರ್ವ ಯುವಕ, ತಾನು ಪ್ರೀತಿಸಿದ ಹುಡುಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ನಡೆಯಲಾಗದ ಪರಿಸ್ಥಿತಿಯಲ್ಲಿದ್ದರೂ, ಆಕೆಯ್ನನೇ ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾನೆ. ಈ ಮೂಲಕ ತನ್ನದು ನಿಜವಾದ ಪ್ರೀತಿ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದ್ದಾನೆ.
ಹೌದು, ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ನಿವಾಸಿ ಮನು ಮಾದರಿ ಮದುವೆಯಾದ ಯುವಕ. ಈತ ಕಳೆದ ಆರು ವರ್ಷಗಳ ಹಿಂದೆ ತನ್ನದೇ ಊರಿನ 'ಸ್ವಪ್ನ'ಳನ್ನು ಪ್ರೀತಿಸಲು ಪ್ರಾರಂಭಿಸಿದ್ದ. ಚೆನ್ನಾಗಿಯೇ ಇದ್ದು ಟೈಪಿಂಗ್ ಕ್ಲಾಸ್ಗೆ ಹೋಗುತ್ತಿದ್ದ ಸ್ವಪ್ನ, ಕಳೆದ ಎರಡು ವರ್ಷಗಳ ಹಿಂದೆ ಇದಕ್ಕಿದ್ದಂತೆ ಕುಸಿದು ಬಿದ್ದು ತನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಳು. ಅಲ್ಲದೆ, ಆಕೆ ವ್ಹೀಲ್ ಚೇರ್ ಮೇಲೆ ಓಡಾಡುವ ಪರಿಸ್ಥಿತಿಗೆ ಬಂದಿದ್ದಾಳೆ. ಈಕೆಯ ಕಾಲು ಸರಿಪಡಿಸಲು ಮನೆಯರು ಕರ್ನಾಟಕ-ಕೇರಳದ ಅನೇಕ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಕೊನೆಗೆ ನಾಟಿ ಮದ್ದು ಮಾಡಿಯೂ ಆಗಿದೆ. ಆದರೂ ಸ್ವಪ್ನಳ ಕಾಲು ಮಾತ್ರ ಸರಿಯಾಗಿಲ್ಲ.
ಓದಿ : ವಾಣಿಜ್ಯ ನಗರಿಯಲ್ಲಿ ಹೋಳಿ: ಪರಸ್ಪರ ಬಣ್ಣ ಎರಚಿ ಸಂಭ್ರಮ
ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯತಮ ಮನು, ಸ್ವಪ್ನಾಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ತನ್ನ ಕೆಲಸವನ್ನು ಬಿಟ್ಟು, ಹಳ್ಳಿಯಲ್ಲಿ ಕೆಲಸ ಮಾಡುತ್ತಾ, ಆಕೆಯನ್ನು ಕರೆದುಕೊಂಡು ಊರೂರು ಸುತ್ತಿದ್ದಾನೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ, ಸ್ವಪ್ನಾಳನ್ನು ಮದುವೆಯಾಗಲು ಮನು ಮುಂದಾಗಿದ್ದ.
ಪ್ರಿಯಕರನಿಗೆ ಬುದ್ಧವಾದ, ಪ್ರೀತಿಗೆ ಬದ್ಧವಾದ ಯುವಕ:
ಸ್ವಪ್ನ ಮಾತ್ರ, ತನ್ನನ್ನು ಮದುವೆಯಾಗಿ ಜೀವನ ಹಾಳು ಮಾಡಿಕೊಳ್ಳುವುದು ಬೇಡ ಅಂತಾ ಮನುಗೆ ಹೇಳಿದ್ದಳು. ಆದರೆ, ಆರು ವರ್ಷದಿಂದ ಪ್ರೀತಿಸಿದ್ದ ಮನು, ನೀನು ಹೇಗೇ ಇರು, ಏನೇ ಆಗಿರಲಿ, ಕೊನೆವರೆಗೂ ನಿನ್ನ ಜೊತೆನೇ ಇರ್ತೀನಿ ಎಂದು ಆಕೆಗೆ ಧೈರ್ಯ ತುಂಬಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸ್ವಪ್ನಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾನೆ.
ವ್ಹೀಲ್ ಚೇರ್ನಲ್ಲೇ ಕೂರಿಸಿ ತಾಳಿ ಕಟ್ಟಿ, ಅದೇ ವ್ಹೀಲ್ ಚೇರ್ನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಾನು ಪ್ರೀತಿಸಿದಾಗ ಚೆನ್ನಾಗಿದ್ಲು, ಇವತ್ತು ಕಾಲು ಸರಿ ಇಲ್ಲ ಅಂತ ಬಿಟ್ರೆ ನನ್ನ ಪ್ರೀತಿಗೆ ಬೆಲೆ ಇಲ್ಲ. ನಾನು ಪ್ರೀತಿಯಿಂದ ಪ್ರೀತಿ ಮಾಡಿದ್ದು. ಹಾಗಾಗಿ ಅವಳನ್ನೇ ತನ್ನ ಜೀವನ ಸಂಗಾತಿಯಾಗಿ ವರಿಸಿದ್ದೇನೆ ಎಂದು ಮನು ಹೇಳುತ್ತಾನೆ.
ಅತ್ತೆಯದ್ದೂ ದೊಡ್ಡಗುಣ:
ನನ್ನ ಮಗ ಇಷ್ಟಪಟ್ಟಿದ್ದಾನೆ ಅಷ್ಟು ಸಾಕು. ಅವಳೇ ನನಗೆ ಮಗಳು-ಸೊಸೆ ಎಲ್ಲಾ ಎಂದು ಮನೆ ತುಂಬಿಸಿಕೊಂಡಿದ್ದೇನೆ. ನನ್ನ ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ಮನು ತಾಯಿ ಅವರು ಸಹ ತಮ್ಮ ದೊಡ್ಡತನ ಮೆರೆದಿದ್ದಾರೆ.
ಹುಡುಗಿ ಕಣ್ಣು, ಸರಿ ಇಲ್ಲ, ಕೈ ಸರಿ ಇಲ್ಲ ಎಂದು ನೂರಾರು ನೆಪಗಳನ್ನು ಹೇಳಿ ದೂರವಾಗುವ ಕೈಕೊಡುವ ಪ್ರೇಮಿಗಳು ಹೆಚ್ಚಿರುವಾಗ ಪ್ರೀತಿಸಿದವಳ ಕೈಹಿಡಿದು ನಡೆಸುವ ಎನ್ನುವ ಮನು ನಿಜಕ್ಕೂ ಸಮಾಜಕ್ಕೆ ಮಾದರಿಯಾಗಬಲ್ಲ ಯುವಕ. ಆತನ ತಾಯಿ ಮಗನ ಇಷ್ಟಕ್ಕೆ ಎರಡು ಮಾತನಾಡದ ದೊಡ್ಡತನ ಮೆರೆದಿರುವುದು ಅವರ ಹೆಂಗರುಳಿಗೆ ಸಾಕ್ಷಿಯಾಗಿದೆ.
ಹ್ಯಾಪಿ ಮ್ಯಾರೀಡ್ ಲೈಫ್ ಆ್ಯಂಡ್ ಸ್ವಪ್ನಾ.. ನೂರ್ಕಾಲ ನಗುತ ನಗುತಾ ಬಾಳಿ ಎಂದು ಹಾರೈಸೋಣ..