ಚಿಕ್ಕಮಗಳೂರು : ಮಹಿಳೆಯ ಕೊಲೆ ಮಾಡಿ ಯಾರಿಗೂ ತಿಳಿಯದಂತೆ ಆಕೆಯ ಶವ ಹೂತು ಹಾಕಿದ್ದ ಪ್ರಕರಣವೊಂದನ್ನು ಘಟನೆ ನಡೆದ ಐದು ತಿಂಗಳ ಬಳಿಕ ಶೃಂಗೇರಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳಸ ತಾಲೂಕಿನ ಪ್ರಕಾಶ್ (25) ಬಂಧಿತ ಆರೋಪಿ. ಶೃಂಗೇರಿ ತಾಲೂಕಿನ ನೆಮ್ಮಾರು ನಿವಾಸಿ ವಾಸಂತಿ (42) ಮೃತ ಮಹಿಳೆ.
ಕಳೆದ ಏಪ್ರಿಲ್ 3 ರಂದು ವಾಸಂತಿ ಕಾಣೆಯಾಗಿರುವ ಕುರಿತು ಆಕೆ ಮಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆದಾಗ ಮಹಿಳೆ ಕೊಲೆಯಾಗಿರುವುದು ಪೊಲೀಸರಿಗೆ ತಿಳಿದು ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ : ದುಡಿಮೆ ಹುಡುಕಿಕೊಂಡು ಶೃಂಗೇರಿಗೆ ಬಂದ ಪ್ರಕಾಶ್ ಎಂಬಾತನಿಗೆ ಕೆಲಸ ಮಾಡೋ ಜಾಗದಲ್ಲಿ ವಾಸಂತಿ ಎಂಬ ಮಹಿಳೆಯ ಪರಿಚಯವಾಗಿದೆ. ಬಳಿಕ ಒಂದೂವರೆ ವರ್ಷದಿಂದ ಇಬ್ಬರೂ ಸ್ನೇಹಿತರಾಗಿದ್ದು, ಬಹಳ ಅನ್ಯೋನ್ಯವಾಗಿದ್ದರು. ಆನಂತರ ಆರೋಪಿಯು ಕೊಪ್ಪಳ ಮೂಲದ ಯುವತಿಯನ್ನು ವಿವಾಹವಾಗಿದ್ದು, ಇವರಿಬ್ಬರ ಸ್ನೇಹದ ನಡುವೆ ಬಿರುಕು ಮೂಡಿತ್ತು. ಒಂದು ದಿನ ಮಾತನಾಡಬೇಕೆಂದು ಕರೆ ಮಾಡಿದ ಮಹಿಳೆ, ನೀನು ಯಾಕೆ ಮದುವೆಯಾದೆ?, ನಾನು ವಿಷ ಕುಡಿಯುತ್ತೇನೆ ಎಂದು ಹೆದರಿಸಿದ್ದಾರೆ. ಈ ವೇಳೆ ಯುವಕ ಮಹಿಳೆಗೆ ಒಂದು ಏಟು ಕೊಟ್ಟಿದ್ದು,ಆಗ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೆಲ ಸಮಯದ ಬಳಿಕ ಮಹಿಳೆ ಮೃತಪಟ್ಟಿರುವುದನ್ನು ಅರಿತ ಆರೋಪಿಯು, ಮೃತದೇಹವನ್ನು 20 ಮೀಟರ್ ದೂರ ಎಳೆದುಕೊಂಡು ಹೋಗಿ, ಮರ ಬಿದ್ದ ಜಾಗದಲ್ಲಿ ಹೂತು ಹಾಕಿ ವಾಪಸ್ ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ಮಹಿಳೆಗೆ ಓರ್ವ ಮಗನಿದ್ದಾನೆ.
ಇದನ್ನೂ ಓದಿ : ಶಿವಮೊಗ್ಗದ ಒಂಟಿ ಮಹಿಳೆ ಕೊಲೆ ಪ್ರಕರಣ : ಮನೆಯ ಕಾರು ಚಾಲಕ ಸೇರಿ 7 ಆರೋಪಿಗಳ ಬಂಧನ
ಇತರ ಪ್ರಕರಣಗಳು : ತುಮಕೂರಿನ ಕುಣಿಗಲ್ ಪಟ್ಟಣದ ಖಾಸಗಿ ವಸತಿಗೃಹದಲ್ಲಿ ನಡೆದ ಮಹಿಳೆ ಕೊಲೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಇದೇ ತಿಂಗಳ ಆಗಸ್ಟ್ 17 ರಂದು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕುಣಿಗಲ್ ಡಿವೈಎಸ್ಪಿ ಲಕ್ಷ್ಮಿಕಾಂತ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ತಾವರೆಕೆರೆ ಗ್ರಾಮದ ಮಂಜುನಾಥ್ ಬಂಧಿತ ಆರೋಪಿ. ಮೃತ ಮಹಿಳೆಯು ಕುಣಿಗಲ್ ತಾಲೂಕಿನ ತಾವರೆಕೆರೆ ಗ್ರಾಮದವರು. ವೈಯಕ್ತಿಕ ಕಾರಣಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೊಲೆ ನಡೆದಿದೆ ಎಂದು ತನಿಖೆಯಿಂದ ಬಯಲಾಗಿತ್ತು.
ಇದನ್ನೂ ಓದಿ : ಕುಣಿಗಲ್ ಲಾಡ್ಜ್ನಲ್ಲಿ ಮಹಿಳೆ ಕೊಲೆ ಪ್ರಕರಣ : ಆರೋಪಿ ಬಂಧನ
ಇನ್ನು ಶಿವಮೊಗ್ಗದ ವಿಜಯನಗರ ಬಡಾವಣೆಯ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನ ಜಿಲ್ಲಾ ಪೊಲೀಸರು ಜೂನ್ 30 ರಂದು ಬಂಧಿಸಿ, ಆರೋಪಿಗಳು ದೋಚಿದ್ದ 35 ಲಕ್ಷ ರೂ. ಹಣವನ್ನೂ ಜಪ್ತಿ ಮಾಡಿದ್ದರು. ಜೂನ್ 17 ರಂದು ರಾತ್ರಿ 11 ಗಂಟೆಗೆ ಒಂಟಿಯಾಗಿ ವಾಸಿಸುತ್ತಿದ್ದ ಕಮಲಮ್ಮ ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿತ್ತು.