ಚಿಕ್ಕಮಗಳೂರು: ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಲು ನೀವೂ ಕಾರಣರಾಗಿದ್ದೀರಿ ಎಂದು ಸಿ.ಟಿ.ರವಿ ವಿರುದ್ದ ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆರೋಪಿಸಿದರು. ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಆಪಾದನೆ ನಿಮ್ಮ ಮೇಲೂ ಇದೆ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಕಿವಿ ಕೇಳಿಸಲ್ಲ, ಬಂದವರನ್ನು ಗುರುತು ಹಿಡಿಯುವುದಿಲ್ಲ, ಓಡಾಡಲು ಆಗುವುದಿಲ್ಲ ಎನ್ನುವ ನೆಪವೊಡ್ಡಿ ಸಿಎಂ ಸ್ಥಾನದಿಂದ ಇಳಿಸಲಾಗಿತ್ತು ಎಂದರು.
ಇನ್ನು, ರಾಜ್ಯದಲ್ಲಿ ಸೂರ್ಯ-ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಕುಮಾರಸ್ವಾಮಿ ಸಿಎಂ ಆಗೋದು ಅಷ್ಟೇ ಸತ್ಯ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡ್ತೀವಿ ಅಂತ ಯಾರ್ಯಾರು ಬಂದು ಕಾಲು ಹಿಡಿಯುತ್ತಾರೋ ಗೊತ್ತಿಲ್ಲ. ಕಾಲು ಹಿಡಿಯೋದಂತೂ ಗ್ಯಾರಂಟಿ ಎಂದು ಹೇಳಿದರು.
2023ರ ಚುನಾವಣೆಯ ಬಳಿಕ ಬಿಜೆಪಿ ನಮ್ಮ ಪಕ್ಷದ ಬಾಗಿಲಿಗೆ ಬರಬೇಕು. ಆಗ ಅವರು ಕುಮಾರಸ್ವಾಮಿ ಮುಂದೆ, ನಮ್ಮ ಮುಂದೆ ಅರ್ಜಿ ಹಿಡಿದು ಬರ್ತಾರೆ. ಈಗ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರು ಯಾವ ಮುಖವನ್ನಿಟ್ಟುಕೊಂಡು ಬರ್ತಾರೋ ಗೊತ್ತಿಲ್ಲ. ಆದರೆ ಈ ಬಾರಿ ಜೆಡಿಎಸ್ ಅಷ್ಟು ಸುಲಭವಾಗಿ ಬಿಜೆಪಿ ನಾಯಕರ ಬಣ್ಣದ ಮಾತುಗಳಿಗೆ ಮರುಳಾಗುವುದಿಲ್ಲ ಎಂದು ಹೇಳಿದರು.
ಬಿಎಸ್ವೈ ಇಲ್ಲದಿದ್ದರೆ ಬಿಜೆಪಿ ಜೀರೋ: ಈ ರಾಜ್ಯದಲ್ಲಿ ಬಿಎಸ್ವೈ ಇಲ್ಲದಿದ್ದರೆ ಬಿಜೆಪಿ ಬಿಗ್ ಜಿರೋ. ಬಿಜೆಪಿಯಲ್ಲಿ ನೂರು ಜನ ಲೀಡರ್ ಇರಬಹುದು. ಬಿಜೆಪಿ ನಿಂತಿರೋದು ಯಡಿಯೂರಪ್ಪ ಮೇಲೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಸಮ್ಮಿಶ್ರ ಸರ್ಕಾರ ಮಾಡದಿದ್ದರೆ ಯಡಿಯೂರಪ್ಪ ಬಿಜೆಪಿಯೊಳಗೆ ಇಷ್ಟು ಪ್ರಭಾವಿ ವ್ಯಕ್ತಿ ಆಗ್ತಿರಲಿಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಬಾಗಿಲು ತೆರೆಯೋಕೆ ಅಂದಿನ ಸಮ್ಮಿಶ್ರ ಸರ್ಕಾರವೇ ಕಾರಣ. ಆದರೆ, ಇಂದು ಅದೇ ಪಕ್ಷದವರು ದಕ್ಷಿಣ ಭಾರತದಲ್ಲಿ ಪಕ್ಷದ ಬಾಗಿಲು ತೆಗೆದವರನ್ನು ಮನೆಗೆ ಕಳುಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಾಸನದಲ್ಲಿ ಪಕ್ಷ ಬಿಡ್ತೀವಿ ಅಂತ ಹೇಳಿದವರದ್ದು ಎರಡು ವರ್ಷದ ಧಾರಾವಾಹಿ. ಅರಸೀಕೆರೆ, ಅರಕಲಗೂಡಿಗೆ ಅಭ್ಯರ್ಥಿಗಳಿದ್ದಾರೆ. ಹೋಗ್ಬಿಟ್ರೆ ಬಿಟ್ಬಿಡ್ತೀವಾ. ಜೆಡಿಎಸ್ ಬಿಟ್ಟು ನೂರಾರು ಜನ ಹೋಗಿದ್ದಾರೆ, 37 ಸೀಟು ಗೆದ್ದಿಲ್ವಾ ಎಂದು ಎಸ್.ಎಲ್.ಭೋಜೇಗೌಡ ಸವಾಲು ಹಾಕಿದರು.
ಇದನ್ನೂಓದಿ: 4 ದಶಕದ ರಾಜಕೀಯ ಹೋರಾಟಗಾರ, ಶಾಸಕನಾಗಿ ಕಡೆಯ ಅಧಿವೇಶನ: ಸದನದಲ್ಲಿ ಬಿಎಸ್ವೈಗೆ ಗೌರವಪೂರ್ವಕ ವಿದಾಯ?