ಚಿಕ್ಕಮಗಳೂರು: ಬಾರ್ ತೆರೆಯುವ ವಿಚಾರಕ್ಕೆ ಪುರುಷರು ಹಾಗೂ ಮಹಿಳೆಯರ ನಡುವೆ ಜಟಾಪಟಿ ನಡೆದಿದೆ. ಮಹಿಳೆಯರು ನಮ್ಮೂರಿಗೆ ಬಾರ್ ಬೇಡವೇ ಬೇಡ ಅಂದ್ರೆ, ಇತ್ತ ಪುರುಷರು ಬಾರ್ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ಇಂತಹ ವಿಚಿತ್ರ ಘಟನೆ ಚಿಕ್ಕಮಗಳೂರು ನಗರದ ಅಬಕಾರಿ ಇಲಾಖೆ ಕಚೇರಿ ಎದುರು ನಡೆಯಿತು.
ಹೌದು.. ಬಾರ್ ತೆರೆಯುವ ವಿಚಾರಕ್ಕೆ ಶುಕ್ರವಾರ ಚಿಕ್ಕಮಗಳೂರು ನಗರದ ಅಬಕಾರಿ ಇಲಾಖೆ ಮುಂದೆ ದೊಡ್ಡ ಹೈಡ್ರಾಮವೇ ನಡೆಯಿತು. ಪುರುಷರ ಒಂದು ಗುಂಪು ನಮಗೆ ಎಣ್ಣೆ ಅಂಗಡಿ ಬೇಕೇ ಬೇಕು ಎಂದು ಘೋಷಣೆಗಳನ್ನು ಕೂಗುತ್ತಿದ್ದರೆ, ಮತ್ತೊಂದೆಡೆ ಮಹಿಳೆಯರ ತಂಡ ನಮ್ಮೂರಿಗೆ ಯಾವುದೇ ಕಾರಣಕ್ಕೂ ಎಣ್ಣೆ ಅಂಗಡಿ ಬೇಡ ಎಂದು ರಸ್ತೆಗೆ ಅಡ್ಡಲಾಗಿ ಕುಳಿತು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ರು.
ಜಿಲ್ಲೆಯ ಕಡೂರು ತಾಲೂಕಿನ ಅಂಚೆ ಚೋಮನಹಳ್ಳಿಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಮದ್ಯದಂಗಡಿ ಆರಂಭಿಸಲಾಗಿದ್ದು, ಈ ಬಾರ್ ವಿರುದ್ಧ ಮಹಿಳೆಯರು ಬೀದಿಗೆ ಇಳಿದಿದ್ದಾರೆ. ಆದ್ರೆ ಅತ್ತ ಮಹಿಳಾ ಪಡೆ ಬಾರ್ ಬೇಡವೇ ಬೇಡ ಅಂತ ಕಣ್ಣೀರು ಹಾಕ್ತಿದ್ರೆ, ಇತ್ತ ಮದ್ಯಪ್ರಿಯರು ಬಾರ್ ಬೇಕು ಸರ್ ಅಂತ ಹಠ ಹಿಡಿದಿದ್ದಾರೆ.
ಒಟ್ಟಾರೆಯಾಗಿ ಮಹಿಳೆಯರು ಬಸ್ ಮಾಡ್ಕೊಂಡ್ ಬಂದು ನಮ್ಮೂರಿಗೆ ಬಾರ್ ಬೇಡವೇ ಬೇಡ ಅಂತ ವಿರೋಧಿಸಿದ್ರೆ, ಇತ್ತ ಮೂರು ಟಿಟಿ ವಾಹನ ಮಾಡಿಕೊಂಡು ಬಂದಿದ್ದ ಪುರುಷರು ಬಾರ್ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದರು. ಈ ಹೈಡ್ರಾಮವನ್ನ ನೋಡಿದ ಅಬಕಾರಿ ಇಲಾಖೆ ಅಧಿಕಾರಿಗಳು ಮಹಡಿ ಮೇಲೆ ಮೂಕ ಪ್ರೇಕ್ಷಕರಂತೆ ನಿಂತಿದ್ದರು.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಬದಲಾಯಿಸಿ: ಸಿ.ಟಿ. ರವಿ