ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಆಲ್ದೂರು ಸಮೀಪದ ಹೆಡೆದಾಳು ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮೀನಾ (45) ಎಂದು ಗುರುತಿಸಲಾಗಿದೆ. ಮಹಿಳೆ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವ ವೇಳೆ ಆನೆ ದಾಳಿ ಮಾಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮೀನಾ ಸಾವಿಗೀಡಾಗಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಶೃಂಗೇರಿ - ಚಿಕ್ಕಮಗಳೂರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಡಿಎಫ್ಒಗೆ ಮತ್ತು ಶಾಸಕಿ ನಯನ ಮೋಟಮ್ಮ ಅವರನ್ನು ತರಾಟೆಗೆ ತೆಗೆದುಕೊಂಡರು. ನಾವು ಹಲವಾರು ಬಾರಿ ಈ ಸಮಸ್ಯೆಯ ಬಗ್ಗೆ ನಿಮ್ಮ ಗಮನಕ್ಕೆ ತಂದಿದ್ದರೂ ಕೂಡ ನೀವು ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸಹ ಏನು ಮಾಡುತ್ತಿಲ್ಲ. ನಾವು ಜೀವ ಭಯದಿಂದಲೇ ಜೀವನ ನಡೆಸುವಂತಾಗಿದೆ ಎಂದು ಗ್ರಾಮಸ್ಥರು ಶಾಸಕಿಯ ಎದುರು ಅಳಲು ತೋಡಿಕೊಂಡರು. ಇದಕ್ಕೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಈ ಕುರಿತು ಮಾಹಿತಿ ತಿಳಿದ ಸಿಎಂ ಸಿದ್ದರಾಮಯ್ಯ ಅವರು ಫೋನ್ ಮೂಲಕ ಗ್ರಾಮಸ್ಥರೊಂದಿಗೆ ಮಾತನಾಡಿ, ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಇನ್ನು ಸಿಎಂ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿಯೇ 15 ಲಕ್ಷ ರೂಪಾಯಿ ಚೆಕ್ ಅನ್ನು ಮೃತಳ ಕುಟುಂಬಸ್ಥರಿಗೆ ವಿತರಿಸಿದರು.
ಮತ್ತೊಂದೆಡೆ, ಮೂಡಿಗೆರೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಡದಾಳು ಬಳಿ ಬುಧವಾರ ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿ ಮೀನಾ ಎಂಬ ಕಾರ್ಮಿಕ ಮಹಿಳೆ ಸಾವಿಗೀಡಾಗಿರುವುದು ಅತ್ಯಂತ ನೋವಿನ ಸಂಗತಿ. ಮೃತ ದುರ್ದೈವಿಯ ಕುಟುಂಬಕ್ಕೆ ಕೂಡಲೇ 15 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಪಟ್ಟಣಕ್ಕೆ ಬಂದಿರುವ ಕಾಡಾನೆಗಳನ್ನು ವಾಪಸ್ ಕಾಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಿ ಸುದೀರ್ಘ ಸಭೆ ನಡೆಸಿ ರಕ್ಷಣಾ ಕಾರ್ಯಗಳ ಕುರಿತಾಗಿ ಕ್ರಮ ಕೈಗೊಳ್ಳಲಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಕಾಫಿ ತೋಟಗಳು ಇರುವುದರಿಂದ ಕಾಡಾನೆಗಳು ಬರುತ್ತಿವೆ. ರೈಲ್ವೆ ಫೆನ್ಸಿಂಗ್ ಹಾಕುವುದೂ ಸೇರಿ ಅಗತ್ಯ ಕ್ರಮಗಳ ಕುರಿತು ಟಾಸ್ಕ್ ಫೋರ್ಸ್ ಗೆ ಸ್ಪಷ್ಟ ಸೂಚನೆ ನೀಡಲು ಅರಣ್ಯ ಸಚಿವರ ಜತೆ ಚರ್ಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆಚ್.ಡಿ.ಕೋಟೆಯಲ್ಲಿ ರೈತನ ಮೇಲೆ ಆನೆ ದಾಳಿ: ಗಂಭೀರ ಗಾಯ