ಚಿಕ್ಕಮಗಳೂರು : ಕೊರೋನಾ ವೈರಸ್ ಕುರಿತಂತೆ ರಾಜ್ಯದಲ್ಲಿ 97 ಜನರಿಗೆ ರಕ್ತ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 68 ಜನರ ಫಲಿತಾಂಶ ಬಂದಿದ್ದು, ರಕ್ತ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ. ಯಾರಿಗೂ ತೊಂದರೆ ಆಗಿಲ್ಲ ಎಂದು ಶ್ರೀರಾಮುಲು ತಿಳಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಜಿಲ್ಲೆಗೆ ಆಗಮಿಸಿದ್ದ ಸಚಿವರು, ಮಾಧ್ಯಮಗಳೊಂದಿಗೆ ಮಾತನಾಡಿ, ಕೊರೋನಾ ವೈರಸ್ ಕುರಿತಂತೆ 68 ಜನರ ರಕ್ತ ಪರೀಕ್ಷೆಯ ವರದಿ ಬಂದಿದ್ದು, ಎಲ್ಲಾ ನೆಗೆಟಿವ್ ಬಂದಿದೆ. ಯಾರಿಗೂ ತೊಂದರೆ ಆಗಿಲ್ಲ. ಮಿಕ್ಕ ಜನರ ಸ್ಯಾಂಪಲ್ ಕೂಡ ಬರ ಬೇಕಿದ್ದು, ಅದು ಕೂಡ ನೆಗೆಟಿವ್ ಇದೆ ಎಂಬ ಮಾಹಿತಿ ಇದೆ ಎಂದರು.
ಏರ್ಪೋರ್ಟ್ಗಳಲ್ಲಿ ಬರುವ ಜನರ ತಪಾಸಣೆ ಮಾಡಲಾಗುವುದು. ನಮ್ಮ ರಾಜ್ಯದಲ್ಲಿಯೂ ಆ ಕುರಿತು ರಕ್ತ ಪರೀಕ್ಷಾ ಕೇಂದ್ರ ಶೀಘ್ರ ತೆರೆಯಲಾಗುವುದು. ಈ ಕುರಿತ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಲ್ಇಡಿ ವ್ಯಾನ್ ಉದ್ಘಾಟನೆ ಮಾಡಿದ್ದು, 15 ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. ಇದರ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇನ್ನು ಬಿಜೆಪಿ ಮಂತ್ರಿಮಂಡಲ ರಚನೆ ಕುರಿತು ಮಾತನಾಡಿ, ಬಿಜೆಪಿಯಲ್ಲಿ ಎಲ್ಲರೂ ಮಂತ್ರಿ ಆಗಬೇಕು ಅಂತಿದ್ದಾರೆ. ಅವಕಾಶಕ್ಕಾಗಿ ಬಿಜೆಪಿ ಕಾಯುತ್ತಿದೆ. ಎಲ್ಲಾ ಹಿರಿಯ ಶಾಸಕರಿಗೆ ಸಿಎಂ ಅವಕಾಶ ಮಾಡಿ ಕೊಡುತ್ತಾರೆ. ಸಣ್ಣ ಪುಟ್ಟ ಅಸಮಾಧಾನ ಇದ್ದರೂ ಕೂಡ ಯಡಿಯೂರಪ್ಪ ಅದನ್ನು ಬಗೆಹರಿಸುತ್ತಾರೆ. ಎಲ್ಲರೂ ಸರ್ಕಾರವನ್ನು ಸುಗಮವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ. ನಾನು ಕೂಡ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, 40 ವರ್ಷಗಳಿಂದ ರಾಜಕಾರಣದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿರುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸೀರಿಯಸ್ ರಾಜಕಾರಣಿ ಅಲ್ಲ. ಅವರು ಕೀಳು ಮಟ್ಟದ ಶಬ್ದ ಬಳಸುತ್ತಿದ್ದಾರೆ. ನಾನು ಎಂದೂ ಅವರಿಗೆ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ರಾಜ್ಯದ ಜನರಿಗೆ ಗೊತ್ತಿದೆ. ಯಾರು ಮನೆ ಹಾಳು ಕೆಲಸ ಮಾಡಿದ್ದಾರೆ ಎಂದು, ಕುಮಾರಸ್ವಾಮಿ ಅವರು ಮಾತನಾಡುವ ಭಾಷೆ ಬೇರೆ ನಾನು ಮಾತನಾಡುವ ಭಾಷೆ ಬೇರೆ ಇದು ಎಲ್ಲರಿಗೆ ಗೊತ್ತಿದೆ ಎಂದರು.
ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹತಾಶರಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ಇದ್ದಾಗ ರಾಜ್ಯದ ಎಲ್ಲಾ ಆರ್ಥಿಕತೆಯನ್ನು ದಿವಾಳಿ ಮಾಡಿವೆ. ನಮ್ಮ ಯಡಿಯೂರಪ್ಪನವರು ಇದ್ದಂತಹ ಸಂಪನ್ಮೂಲ ಬಳಸಿಕೊಂಡು ಉತ್ತಮ ಬಜೆಟ್ ನೀಡುತ್ತಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ನವರು ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಿ ಹೋಗಿದ್ದಾರೆ. ಏನು ಉಳಿಸಿಲ್ಲ ಎಂದರು.